ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆ, ಇದು ಹಬ್ಬದ ಕೊಡುಗೆ: ರಾಮು ನಾಯ್ಕ
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಅಗಸ್ಟ 15 ಸ್ವಾತಂತ್ರ್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲಿನಿಂದ ಮಾತನಾಡುತ್ತ, ದೇಶದ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮಾಡುತ್ತೇನೆ. ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ. ಕಡಿಮೆ ಮಾಡಿ ದೇಶದ ಜನರಿಗೆ ಭರ್ಜರಿ ದೀಪಾವಳಿ ಕೊಡುಗೆ ನೀಡುವುದಾಗಿ ಘೋಷಿಸಿದ್ದರು.
ಈಗ ಪ್ರಧಾನಿಯವರು ದೇಶದ ಬಡಜನರು, ರೈತರು ಬಳಸುವ ಅನೇಕ ವಿಧದ ಜನೋಪಯೋಗಿ, ನಿತ್ಯೋಪಯೋಗಿ, ಜೀವನಾವಶ್ಯಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ, ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಪ್ರತಿಕ್ರಯಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಕೇಶತೈಲ, ಸಾಬೂನು, ಶಾಂಪು, ಶೇವಿಂಗ ಕ್ರೀಮ್, ಟೂಥ ಬ್ರಷ್, ಪೇಸ್ಟ್, ಸೈಕಲ್, ಮನೆ ಬಳಕೆ ಉಪಕರಣಗಳು, ಪಾದರಕ್ಷೆ, ಬೆಣ್ಣೆ, ತುಪ್ಪ, ಮಕ್ಕಳಿಗೆ ಹಾಲು ಕುಡಿಸುವ ಬಾಟಲಿಗಳು, ಬೇಬಿ ನ್ಯಾಪಕಿನ್, ಡೈಪರಗಳು, ಹೊಲಿಗೆಯಂತ್ರ, ಟ್ರ್ಯಾಕ್ಟರ್, ಅವುಗಳ ಟೈಯರ್, ಬಿಡಿ ಭಾಗಗಳು, ಹನಿ ನೀರಾವರಿಗೆ ಬಳಸುವ ವಸ್ತುಗಳು, ಕ್ರಷಿ ಹಾಗೂ ತೋಟಗಾರಿಕೆಯಲ್ಲಿ ಬಳಸುವ ಉಪಕರಣಗಳು, ಇತ್ಯಾದಿ ವಸ್ತುಗಳ ಮೇಲೆ ಇಲ್ಲಿಯವರೆಗೆ ಶೇಕಡಾ 12 ರಿಂದ18 ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು.
ಅದನ್ನು ಸಾಮೂಹಿಕವಾಗಿ ಅತ್ಯಂತ ಕನಿಷ್ಠ ಶೇಕಡಾ 5 ಕ್ಕೆ ಇಳಿಸಲಾಗಿದೆ. ಅಲ್ಟ್ರಾ ಹೈ ಟೆಂಪರೇಚರ್ ಹಾಲು, ಪನ್ನೀರ, ರೊಟ್ಟಿ, ಪರೋಟಾ, 33 ರೀತಿಯ ಜೀವರಕ್ಷಕ ಔಷದಿಗಳು, ಕ್ಯಾನ್ಸರ್ ನಿವಾರಕ ಔಷದಿಗಳು, ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳು, ವಯಕ್ತಿಕ ಜೀವವಿಮೆ, ಆರೋಗ್ಯ ಪಾಲಿಸಿಗಳು, ವಿದ್ಯಾರ್ಥಿಗಳು ಬಳಸುವ ನಕಾಶೆ, ಚಾಟ್ರ್ಸ, ಜಾಮಿಟ್ರಿ ಉಪಕರಣಗಳು, ಪೆನ್ಸಿಲ್ಸ್, ಶಾರ್ಪನರ್ಸ್, ಬಳಪ, ಖಡು, ಪಠ್ಯ ಪುಸ್ತಕ, ನೋಟಬುಕ್ ಇವುಗಳಿಗೆ ಇನ್ನು ಮುಂದೆ ತೆರಿಗೆಯೇ ಇರುವದಿಲ್ಲ, ಇವುಗಳಿಗೆ ಜಿ.ಎಸ್.ಟಿ ಸಂಪೂರ್ಣ ಮನ್ನಾ ಮಾಡಲಾಗಿದೆ.
ಏರ್ ಕೂಲರ್, ಟೀವಿ, ವಾಷಿಂಗ್ ಮಷಿನ್, ಸಣ್ಣ ಕಾರುಗಳು, ಬೈಕುಗಳು, ಬಸ್, ಟ್ರಕ್, ಅಂಬುಲೆನ್ಸ್, ಎಲ್ಲ ರೀತಿಯ ಅಟೋ ಬಿಡಿಭಾಗಗಳು, ತ್ರಿಚಕ್ರ ವಾಹನ, ಸಿಮೆಂಟ್ ಇತ್ಯಾದಿ ವಸ್ತುಗಳ ಮೇಲೆ ಇಲ್ಲಿಯವರೆಗೆ ವಿಧಿಸಲಾಗುತ್ತಿದ್ದ ಸುಂಕದ ಪ್ರಮಾಣವನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಲಾಗಿದೆ.
ಭಾರತದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಬ್ಬದ ಬಂಪರ್ ಗಿಫ್ಟ್ ನೀಡಿದ ಕೇಂದ್ರದ ಮೋದಿ ಆಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಮು ನಾಯ್ಕ ತಿಳಿಸಿದ್ದಾರೆ.