ಯಲ್ಲಾಪುರ ಕ್ಷೇತ್ರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆಯಾಗಿದೆ. ಹಂತ,ಹಂತವಾಗಿ ಜನರ ಬೇಡಿಕೆಯ ಕೆಲಸಗಳನ್ನು ಮಾಡುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಸೋಮವಾರ 9.90 ಕೋಟಿ ರೂಪಾಯಿ ವೆಚ್ಚದ ತಾಲೂಕಿನ ನಂದೊಳ್ಳಿ-ಅಣಲಗಾರ ಗೋಪಾಲಕೃಷ್ಣ ದೇವಾಲಯ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ನಂತರ ಅಣಲಗಾರ ದೇವಾಲಯದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪಕ್ಷ ರಾಜಕೀಯ ಇರಬೇಕು, ಅಭಿವೃದ್ಧಿಯ ವಿಷಯ ಬಂದಾಗ ಜನರ ಹಿತವೇ ನಮ್ಮ ಗುರಿಯಾಗಿರಬೇಕು, ಜನರ ಸಹಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ತಾಲೂಕಿನಲ್ಲಿ ಅನೇಕ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಳ್ಳೆಯ ಕೆಲಸ ಮಾಡಿದಾಗ ಜನರು ಪ್ರೋತ್ಸಾಹಿಸಬೇಕು, ಇದು ಜನರ ಕರ್ತವ್ಯವೂ ಹೌದು ಎಂದ ಅವರು, ಫಲಾಪೇಕ್ಷೆ ಇಲ್ಲದೇ ನನ್ನ ಕರ್ತವ್ಯವನ್ನು ಮಾಡುವುದಷ್ಟೇ ನನ್ನ ಗುರಿಯಾಗಿದೆ. ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನನಗೆ 47 ವರ್ಷದ ಸುಧೀರ್ಘ ರಾಜಕಾರಣದ ಅನುಭವ ಇದೆ. ನಾನು ಬಾಲಿಷ ರಾಜಕಾರಣ ಮಾಡುವುದಿಲ್ಲ. ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಹೊಗಳಲು ಆಗದಿದ್ದರೆ ಇರಲಿ, ತೆಗಳುವುದನ್ನು ಮಾಡಬಾರದು, ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಜನರಿಗೆ ಕೃತಜ್ಞತಾ ಭಾವನೆ ಇರಬೇಕೆ ವಿನಃ ಕೃತಘ್ನತೆ ಇರಬಾರದು ಎಂದು ಮಾರ್ಮಿಕವಾಗಿ ನುಡಿದರು.

ಈ ರಸ್ತೆಯೂ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಶಕ್ತಿ ಇದ್ದವರ ಸಹಕಾರ ಪಡೆದಿದ್ದೇನೆ, ಇದಕ್ಕೆ ನನಗೆ ಯಾವುದೇ ಸಂಕೋಚ ಇಲ್ಲ, ಎಲ್ಲರೂ ಕೈಜೋಡಿಸಿದಾಗ ಮಾತ್ರ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದ ಅವರು 9.90 ಕೋಟಿ ರೂಪಾಯಿ ವೆಚ್ಚದ ಅಣಲಗಾರ ರಸ್ತೆಯ ಕಾಮಗಾರಿ ಗುಣಮಟ್ಟದ್ದಾಗಿರಲಿ ಎಂದು ಗುತ್ತಿಗೆದಾರನಿಗೆ ಸೂಚಿಸಿದರು.

ನಾಗರಾಜ ಕವಡಿಕೆರೆ, ಟಿ.ಆರ್.ಹೆಗಡೆ, ಆರ್.ಎಸ್.ಭಟ್ಟ, ಡಾ.ಶಂಕರ ಭಟ್ಟ ಬಾಲಿಗದ್ದೆ, ಲೋಕೋಪಯೋಗಿ ಇಲಾಖೆಯ ಎಇಇ ಸಂಜೀವ ಮುಂತಾದವರು ಮಾತನಾಡಿದರು. ಪ್ರಮುಖರಾದ ರಾಮಕೃಷ್ಣ ಭಟ್ಟ ಬಿದ್ರೇಪಾಲ, ಟಿ.ಕೆ.ಭಾಗ್ವತ್, ನಾಗೇಶ ಹೆಗಡೆ, ಮುರಳಿ ಹೆಗಡೆ, ವಿಶ್ವನಾಥ ಭಟ್ಟ, ಗುತ್ತಿಗೆದಾರ ಪರೀಕ್ಷಿತ ನಾಯಕ ಮುಂತಾದವರು ಇದ್ದರು. ಟಿ.ವಿ.ಭಾಗ್ವತ್ ಸ್ವಾಗತಿಸಿದರು. ಎನ್.ಆರ್.ಭಟ್ಟ ಬಿದ್ರೇಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಶ್ರೀಧರ ಅಣಲಗಾರ ನಿರ್ವಹಿಸಿದರು, ಗಣೇಶ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading