ಟಿಪ್ಪರ್ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರನು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಯಲ್ಲಾಪುರ ಹುಬ್ಬಳ್ಳಿ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಘಟನೆಯ ವಿವರ
ಟಿಪ್ಪರ್ ಲಾರಿ ಚಾಲಕ, ಆರೋಪಿ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಅಕ್ಬರ್ ಸಾಬ್ ಶೇಖ್ ಟಿಪ್ಪರ್ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಯಲ್ಲಾಪುರ ಹುಬ್ಬಳ್ಳಿ ರಸ್ತೆಯಲ್ಲಿ, ಕೆ.ಜಿ.ಎನ್.ಬ್ರಿಕ್ ಇಂಡಸ್ಟ್ರಿ ಹತ್ತಿರ ಮುಂದಿನ ವಾಹನವನ್ನು ಓವರ್ ಟೇಕ್ ಮಾಡಿಕೊಂಡುಬಂದು,
ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬೈಕಿಗೆ ಟಿಪ್ಪರ್ ಲಾರಿಯ ಬಂಪರ್ ತಗುಲಿ, ಬೈಕ್ ಸವಾರನು ಬೈಕ್ ಸಮೇತ ಟಿಪ್ಪರ್ ಲಾರಿಯ ಬಲಭಾಗದ ಟೈರ್ ಕೆಳಗೆ ಹೋಗಿದ್ದು, ಈ ಅಪಘಾತದಿಂದ ಬೈಕ್ ಸವಾರ ಯಲ್ಲಾಪುರ ಪಟ್ಟಣದ ನೂತನ ನಗರ ಜಡ್ಡಿಯ 25 ವರ್ಷದ ರಾಘವೇಂದ್ರ ಶ್ಯಾಮರಾವ್ ಕುಲಕರ್ಣಿ ಗಂಭೀರವಾಗಿ ಗಾಯಗೊಂಡಿದ್ದನು.
ಗಾಯಾಳುವನ್ನು ಯಲ್ಲಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ರಾಘವೇಂದ್ರ ಕುಲಕರ್ಣಿ ಮೃತಪಟ್ಟಿದ್ದು, ಈ ಕುರಿತು ದಯಾನಂದ ಮರಾಠಿ ಬೆಳಗೇರಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.