ಅಣಲಗಾರ ದೇವಾಲಯದಲ್ಲಿ ವೈದಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ ಸಂಪನ್ನ
ಯಲ್ಲಾಪುರ ಸೀಮಾ ವೈದಿಕ ಪರಿಷತ್ತಿನ ಆಶ್ರಯದಲ್ಲಿ ತಾಲೂಕಿನ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಶುಕ್ರವಾರ ವೈದಿಕ ಸಮಾವೇಶ ಮತ್ತು ಲೋಕಕಲ್ಯಾಣಾರ್ಥವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವೈದಿಕರಿಂದ 100 ಆವರ್ತನ ಲಕ್ಷ್ಮೀನಾರಾಯಣ ಹೃದಯ ಪಾರಾಯಣ, ಪುರುಷ ಸೂಕ್ತ ಪಾರಾಯಣ, ಶ್ರೀಸೂಕ್ತ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಲಕ್ಷ್ಮೀನಾರಾಯಣ ಹೃದಯ ಮಂತ್ರ ಹವನ, ಪೂರ್ಣಾಹುತಿ ನಡೆಯಿತು. ಮಾತೆಯರಿಂದ ಸಮಗ್ರ ಭಗವದ್ಗೀತಾ ಪಠಣ ನಡೆಯಿತು.
ಗೌರವ ಸನ್ಮಾನ ಮತ್ತು ಉಪನ್ಯಾಸ
ದೇವಾಲಯದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪುರೋಹಿತರಾದ ವೇ.ಮೂ.ನಾರಾಯಣ ಭಟ್ಟ ಮೊಟ್ಟೆಗದ್ದೆಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಡಾ.ಶಂಕರ ಭಟ್ಟ ಬಾಲೀಗದ್ದೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅವುಗಳ ಮಹತ್ವ ಹಾಗೂ ಸನಾತನ ಸಂಪ್ರದಾಯ, ಧಾರ್ಮಿಕ ಆಚರಣೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸೀಮಾ ವೈದಿಕ ಪರಿಷತ್ತಿನ ಅಧ್ಯಕ್ಷ ವಿ.ನಾರಾಯಣ ಭಟ್ಟ ಉಮ್ಮಚಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೇಪಾಲ, ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ, ಸೀಮಾ ವೈದಿಕ ಪರಿಷತ್ತಿನ ಸಹಕಾರ್ಯದರ್ಶಿ ವಿ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ, ಪ್ರಮುಖರಾದ ಜಿ.ಆರ್.ಭಟ್ಟ, ಮಂಜುನಾಥ ಭಟ್ಟ ಮುಂತಾದವರು ಇದ್ದರು.
ಸೀಮಾ ವೈದಿಕ ಪರಿಷತ್ತಿನ ಕಾರ್ಯದರ್ಶಿ ವಿ.ಲಕ್ಷ್ಮೀನಾರಾಯಣ ಭಟ್ಟ ತಾರಿಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಾಂತ ಭಟ್ಟ ಹಾಗೂ ಶ್ರೀರಾಮ ಭಟ್ಟ ವೇದಘೋಷ ಮಾಡಿದರು. ನಾರಾಯಣ ಭಟ್ಟ ನಿರ್ವಹಿಸಿದರು. ಶ್ರೀಹರಿ ಭಟ್ಟ ವಂದಿಸಿದರು.