ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕಿನ ಹಿಂದೆ ಕುಳಿತು ಸಾಗುತ್ತಿದ್ದ ಸಹಪ್ರಯಾಣಿಕಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಘಟನೆಯ ವಿವರ:
ಗದಗ ಕಳಸಾಪುರದ ಬಟ್ಟೆ ವ್ಯಾಪಾರಿ ಹನುಮಪ್ಪ ತಂದೆ ಜಗನಪ್ಪ ನಾಯಕ ತನ್ನ ಮಗಳಾದ ವೀಣಾ ಇವಳನ್ನು ಬೈಕಿನಲ್ಲಿ ಕೂರಿಸಿಕೊಂಡು ಜೂ.2ರಂದು ಬೆಳಿಗ್ಗೆ 9 ಗಂಟೆಗೆ ಗೋಕರ್ಣದಿಂದ ಗದಗಕ್ಕೆ ಹೋಗುತ್ತಿರುವಾಗ,
ಯಲ್ಲಾಪುರ ತಾಲೂಕಿನ ಕೋಳಿಕೆರೆ ಹತ್ತಿರ ಹಿಂದಿನಿಂದ ವೇಗವಾಗಿ ಬಂದ ಯಾವುದೋ ಅಪರಿಚಿತ ವಾಹನ ಬೈಕಿಗೆ ಡಿಕ್ಕಿಯಾದ ಕಾರಣದಿಂದಲೋ ಅಥವಾ ಬೈಕ್ ಸವಾರನು ಬೈಕಿನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ಪರಿಣಾಮದಿಂದಲೋ ಬೈಕಿನ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದ ವೀಣಾ ಅವಳಿಗೆ ಗಂಭೀರವಾದ ಗಾಯವಾಗಿತ್ತು. ಬೈಕ್ ಸವಾರನು ಗಾಯಗೊಂಡಿದ್ದನು.
ಗಾಯಾಳು ವೀಣಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 22 ವರ್ಷದ ವೀಣಾ ಗುರುವಾರ ಸಂಜೆ ಮೃತಪಟ್ಟಿದ್ದಾಳೆ. ಈ ಕುರಿತು ಬೈಕ್ ಸವಾರನ ಸಹೋದರ ಗದಗದ ಸುರೇಶ ನಾಯಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.