ಸಂಚಾರಿ ನಿಯಮ ಉಲ್ಲಂಘಿಸಿದಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಯಲ್ಲಾಪುರ ತಾಲೂಕಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸೋಮವಾರ ಬೈಕಿನಲ್ಲಿ ಬಂದಿದ್ದ ಕೆಲವು ಯುವಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಪುಂಡಾಟ ಮೆರೆದಿದ್ದು, ಪೊಲೀಸರು ಈ ಯುವಕರಿಗೆ ದಂಡ ವಿಧಿಸಿ, ಸಂಚಾರಿ ನಿಯಮಗಳ ಅರಿವು ಮೂಡಿಸಿದ್ದಾರೆ.
ಸೋಮವಾರ ಹುಬ್ಬಳ್ಳಿ ಕಡೆಯಿಂದ ಸಾತೊಡ್ಡಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬೈಕಿನಲ್ಲಿ ಬಂದಿದ್ದ ಕೆಲವು ಯುವಕರು, ದೊಡ್ಡದಾಗಿ ಹಾಡು ಹಾಡುತ್ತಾ, ಶಿಳ್ಳೆ, ಕೇಕೇ ಹಾಕುತ್ತಾ ಮೈಮರೆತು ಬೈಕಿನಲ್ಲಿ ಸಾಗುತ್ತಿದ್ದರು. ಇವರ ವರ್ತನೆಯನ್ನು ಕಂಡ ಸಾರ್ವಜನಿಕರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.
ಯುವಕರು ಹೆಲ್ಮೆಟ್ ಧರಿಸದೇ, ನಂಬರ್ ಪ್ಲೇಟ್ ಸಹ ಇರದ ಬೈಕುಗಳನ್ನು ವೇಗವಾಗಿ ಮತ್ತು ಮನಬಂದಂತೆ ಚಲಾಯಿಸುತ್ತಿದ್ದರು. ಇವರನ್ನು ಪತ್ತೆಹಚ್ಚಿದ ಪೊಲೀಸರು ಒಟ್ಟೂ 8 ಸಾವಿರ ರೂ ದಂಡ ವಿಧಿಸಿದ್ದಾರೆ. ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಬುದ್ಧಿವಾದ ಹೇಳಿದ್ದಾರೆ. 7 ಯುವಕರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ