ಪ್ರಸ್ತಾಪಿತ ನದಿ ತಿರುವು ಯೋಜನೆ ಸಂಪೂರ್ಣ ಅವೈಜ್ಞಾನಿಕವಾದದ್ದು, ಪರಿಸರಕ್ಕೆ ಮಾರಕವಾದ ಈ ಯೋಜನೆ ಸಂಪೂರ್ಣವಾಗಿ ನಿಲ್ಲುವವರೆಗೂ ನಿರಂತರ ಹೋರಾಟ ಅಗತ್ಯ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಅವರು, ಬುಧವಾರ ಸಂಜೆ ಬೇಡ್ತಿ ನದಿಯ ತಟದಲ್ಲಿ ಹೊಳೆ ಹುಲಿಯಪ್ಪನಕಟ್ಟೆ ಸಮೀಪ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಹಸಿರು ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸರ್ಕಾರಕ್ಕೆ ಈ ಬೇಡ್ತಿ ಯೋಜನೆ ಮಾಡುವುದಕ್ಕೆ ಬಹಳ ಅವಸರ ಮತ್ತು ಆಸಕ್ತಿ ಇರುವಂತೆ ಕಾಣುತ್ತಿದೆ.

ಈ ಯೋಜನೆಯನ್ನು ನಾವು ಸಾತ್ವಿಕವಾದ ಹೋರಾಟದ ಮೂಲಕ ವಿರೋಧಿಸಬೇಕು, ಈ ನದಿಗುಂಟ ನಾವು ಗಂಗಾವಳಿ ತುದಿಯವರೆಗೂ ಜಾಗೃತಿ ನಡೆಸುವ ಕೆಲಸ ಮಾಡಬೇಕು. ಬಯಲುಸೀಮೆ ಪ್ರದೇಶಗಳಲ್ಲಿ 2-3 ಬೆಳೆ ಬೆಳೆಯಲಾಗುತ್ತದೆ. ಅಲ್ಲದೇ ಪ್ರತಿ ರೈತರಿಗೂ ನೂರಾರು ಏಕರೆ ಜಮೀನಿದೆ. ಮಲೆನಾಡಿನ ರೈತರಿಗೆ 3 ಎಕರೆ ಇದ್ದರೆ ಹೆಚ್ಚು. ಈ ನದಿಯ ನೀರನ್ನು ಅದರಷ್ಟಕ್ಕೇ ಹರಿಯಬಿಡುವುದೇ ಉತ್ತಮ. ಹೋರಾಟ ನಿರಂತರ ಮುಂದುವರೆಯಬೇಕು.

ಹೋರಾಟದ ಯೋಜನೆಯ ಸರಪಳಿಯ ಕೊಂಡಿ ಕಳಚಿಕೊಳ್ಳಕೂಡದು ಎಂದ ಅವರು, ಜಿಲ್ಲೆಯ ನದಿ, ಕಣಿವೆ, ಪ್ರದೇಶಗಳ ರಕ್ಷಣೆ ನಮ್ಮೆಲ್ಲರ ಹೊಣೆ .ಅತಾರ್ಕಿವಾದ ಸಂಗತಿಯಿಂದ ಭೂಕುಸಿತ ಸೇರಿದಂತೆ ಜಿಲ್ಲೆಯ ಹಲವೆಡೆ ಅವಘಡಗಳು ಹೆಚ್ಚಾಗುತ್ತಲಿವೆ ಎಂದರು.

ಕೊಳ್ಳ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಎಲ್ಲ ಹೋರಾಟಗಳು ಯಶಸ್ವಿಯಾಗಿ ನಡೆದಿದೆ. 26 ಕೋಟಿ ರೂ ವೆಚ್ಚದಲ್ಲಿ ಬೇಡ್ತಿಯಿಂದ ಯಲ್ಲಾಪುರಕ್ಕೆ ನೀರು ತರುವ ಯೋಜನೆ ಸಂಪೂರ್ಣ ವಿಫಲವಾಗಿದೆ. ಯಲ್ಲಾಪುರಕ್ಕೆ ನೀರು ತರಲಾಗದ ಸರ್ಕಾರ ಬಯಲುಸೀಮೆಗೆ ನೀರು ಒಯ್ಯಬಹುದೇ ಜಿಲ್ಲೆಯಲ್ಲಿ 7 ಜಲವಿದ್ಯುತ್ ಯೋಜನೆ ಮಾಡಲಾಗಿದೆ. ಕಳಚೆ ಸೇರಿದಂತೆ ಅನೇಕ ಗುಡ್ಡೆಗಳು ಕುಸಿಯುತ್ತಿದೆ. ಸಾವಿರಾರು ಕೋಟಿ ರೂ ವೆಚ್ಚ ಮಾಡಿ ದುಡ್ಡು ಹೊಡೆಯುವ ಯೋಜನೆಯೇ ಹೊರತೂ ನೀರಾವರಿ ಯೋಜನೆಯಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪ್ರಮುಖರಾದ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಅನಂತ ಭಟ್ಟ ಹುಳಗೋಳ ಮಾತನಡಿದರು. ವೇ.ಲಕ್ಷ್ಮೀನಾರಾಯಣ ಭಟ್ಟ ತಾರಿಮಕ್ಕಿ ಮತ್ತು ಹರೀಶ ಹೆಗಡೆ ವೇದಘೋಷಗೈದರು. ಮಳಲಗಾಂವ್ ಗ್ರಾಮದ ವತಿಯಿಂದ ನಾಗೇಶ ಸುಬ್ರಾಯ ಭಟ್ಟ ದಂಪತಿ ಶ್ರೀಗಳಿಗೆ ಫಲಸಮರ್ಪಿಸಿದರು, ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಎಂ.ಕೆ.ಭಟ್ಟ ನಿರ್ವಹಿಸಿದರು. ಸುಬ್ರಹ್ಮಣ್ಯ ಭಟ್ಟ ವಂದಿಸಿದರು.

=======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading