ಯಲ್ಲಾಪುರತಾಲೂಕಿನ ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದಲ್ಲಿ ಸುರ್ಧೀರ್ಘವಾಗಿ ಸೇವೆ ಸಲ್ಲಿಸಿದ ಜಿ.ವಿ.ಭಟ್ ಅಡ್ಕೆಮನೆ ಇಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ವಜ್ರಳ್ಳಿ ಸೊಸೈಟಿಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಇವರು, ತಮ್ಮ ಜನಸ್ನೇಹಿ ಆಡಳಿತದಿಂದ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಯಲ್ಲಾಪುರತಾಲೂಕಿನ ಹೊನ್ನಗದ್ದೆಯ ಕೃಷಿ ಕುಟುಂಬದಲ್ಲಿ 13-05-1966ರಲ್ಲಿ ಜನಿಸಿದ ಜಿ.ವಿ.ಭಟ್ ಅವರು, ಪ್ರಾಥಮಿಕ ಶಿಕ್ಷಣವನ್ನು ಹೊನ್ನಗದ್ದೆ ಶಾಲೆಯಲ್ಲಿ ಪಡೆದಿದ್ದಾರೆ. ಪದವಿ ಶಿಕ್ಷಣವನ್ನು ದಾಂಡೇಲಿಯ ಬಂಗೂರುನಗರ ಕಾಲೇಜಿನಲ್ಲಿ ಪೂರೈಸಿದ್ದಾರೆ. ಪದವಿ ಶಿಕ್ಷಣದ ನಂತರ 1989ರಲ್ಲಿ ಓರಿಯಂಟಲ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾದರು. ಈ ಕಂಪನಿಯ ವಿವಿಧ ಹುದ್ದೆಗಳನ್ನು ನಿಭಾಯಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.
199ರಲ್ಲಿ ವಜ್ರಳ್ಳಿ ಸೊಸೈಟಿಗೆ ಸೇರಿದರು. 2007ರಲ್ಲಿ ಈ ಸೊಸೈಟಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದರು. 2014ರಲ್ಲಿ ಈ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ಅಲಂಕರಿಸಿದರು.
ವಜ್ರಳ್ಳಿ ಸೊಸೈಟಿ ಪ್ರಗತಿಗೆ ಅಮೂಲ್ಯ ಸೇವೆ
ಜಿ.ವಿ.ಭಟ್ ಅಡ್ಕೆಮನೆಯವರು ತಮ್ಮ ಸೇವಾ ಅವಧಿಯಲ್ಲಿ ವಜ್ರಳ್ಳಿ ಸೊಸೈಟಿಯನ್ನು ಸದಸ್ಯರ ಹಾಗೂ ಆಡಳಿತ ಮಂಡಳಿಯವರ, ಸಾರ್ವಜನಿಕರ ಸಹಕಾರದೊಂದಿದೆ ಪ್ರಗತಿಪಥದಲ್ಲಿ ಕೊಂಡೊಯ್ಯಲು ಅವಿರತವಾಗಿ ಶ್ರಮಿಸಿದ್ದಾರೆ. ಜಿ.ವಿ.ಭಟ್ ಅಡ್ಕೆಮನೆಯವರು ತಮ್ಮ ದಕ್ಷ ಆಡಳಿತದಿಂದಾಗಿ ಜನಮನ್ನಣೆ ಪಡೆದಿದ್ದು, ಮಾದರಿಯಾದ ಆಡಳಿತವನ್ನು ನೀಡಿದ್ದಾರೆ. ಜಿ.ವಿ.ಭಟ್ ಅವರ ಸೇವಾ ಅವಧಿಯಲ್ಲಿಯೇ ಸೊಸೈಟಿಯ ಅಮೃತಮಹೋತ್ಸವವು ವಿಜೃಂಭಣೆಯಿಂದ ನಡೆದಿರುವುದನ್ನು ಸ್ಮರಿಸಬಹುದು.
ವಿವಿಧ ಪ್ರಶಸ್ತಿ, ಪುರಸ್ಕಾರ
ಜಿ.ವಿ.ಭಟ್ ಅಡ್ಕೆಮನೆಯವರು ವಿವಿಧ ಪ್ರಶಸ್ತಿ, ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.
ತಾಲೂಕಾ ಮಟ್ಟದ ಅತ್ಯುತ್ತಮ ಕಾರ್ಯನಿರ್ವಾಹಕ ಪ್ರಶಸ್ತಿ, ಕರ್ನಾಟಕ ಸಹಕಾರ ಮಹಾಮಂಡಳದಿಂದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಹಕಾರಿ ಕ್ಷೇತ್ರದ ನಿರ್ವಹಣೆಯಲ್ಲಿ ಅಪೆಕ್ಸ್ ಮತ್ತು ನಬಾರ್ಡ್ ಸಂಸ್ಥೆಗಳಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.
ಶುಭ ಹಾರೈಕೆ
ಜಿ.ವಿ.ಭಟ್ ಅಡ್ಕೆಮನೆಯವರ ಸೇವಾ ನಿವೃತ್ತಿಯ ಸಂದರ್ಭದಲ್ಲಿ ಪ್ರಮುಖರಾದ ಮಂಜುನಾಥ ಕೋಮಾರ ಯಲ್ಲಾಪುರ, ನಾರಾಯಣ ಹೆಗಡೆ ಸುರಗಿಮನೆ, ಜಯನಾರಾಯಣ ಭಟ್ ನೆಡಿಗೆಮನೆ, ಗಣಪತಿ ಗಾಂವ್ಕಾರ್ ಕಲ್ಮನೆಯವರು ಜಿ.ವಿ.ಭಟ್ ಅಡ್ಕೆಮನೆಯವರಿಗೆ ಶುಭಾಶಯ ಕೋರಿದ್ದಾರೆ. ಜಿ.ವಿ.ಭಟ್ ಅಡ್ಕೆಮನೆಯವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ. ವಜ್ರಳ್ಳಿ ಸೊಸೈಟಿಯ ಸರ್ವ ಸದಸ್ಯರು, ಆಡಳಿತ ಮಂಡಳಿಯವರು, ವಜ್ರಳ್ಳಿ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಅಪಾರ ಅಭಿಮಾನಿಗಳು, ಬಂಧು ಬಳಗದವರು ಜಿ.ವಿ.ಭಟ್ ಅಡ್ಕೆಮನೆಯವರಿಗೆ ಶುಭಾಶಯಗಳನ್ನು ಕೋರಿದ್ದಾರೆ.