ಹವ್ಯಕರ ಶ್ರೇಷ್ಠತೆ ಇರುವುದು ಸಂಸ್ಕಾರದಲ್ಲಿ: ಸ್ವರ್ಣವಲ್ಲೀ ಶ್ರೀ
ಹವ್ಯಕರ ಶ್ರೇಷ್ಠತೆ ಇರುವುದು ಸಂಸ್ಕಾರದಲ್ಲಿ, ಯಾವುದೇ ಕಾರಣಕ್ಕೂ ಸಂಸ್ಕಾರವನ್ನು ಉಪೇಕ್ಷಿಸುವುದು ಸರಿಯಲ್ಲ. ಸಂಸ್ಕಾರಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಶ್ರೇಷ್ಠ ಸಂಸ್ಕಾರವನ್ನು ಕಾಪಾಡಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಯಲ್ಲಾಪುರ ಪಟ್ಟಣದ ಕಾರ್ಮಿಕ ಭವನದಲ್ಲಿ ರವಿವಾರ ಸಂಜೆ ನಡೆದ ಸಂಸ್ಕಾರೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರಗಳನ್ನು ಪುನಃ ಜಾಗೃತಿಗೊಳಿಸುವ ಅನಿವಾರ್ಯತೆ ಇದೆ. ಗಂಡುಮಕ್ಕಳಿಗೆ ಉಪನಯನ, ಗಾಯತ್ರಿ ಉಪಾಸನೆ, ಹೆಣ್ಣು ಮಕ್ಕಳಿಗೆ ಕನ್ಯಾಸಂಸ್ಕಾರದಂತಹ ಸಂಸ್ಕಾರಗಳು ಮನಸ್ಸಿನ ಏಕಾಗ್ರತೆಗೆ ಕಾರಣವಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನ ಉದ್ವೇಗ ಕಡಿಮೆಗೊಳಿಸುತ್ತವೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಸಂಸ್ಕಾರ ದೊರೆತರೆ ದಂಪತಿಗಳ ಜೀವನ, ಭವಿಷ್ಯ ಉಜ್ವಲವಾಗುತ್ತದೆ.
ವೇದೋಕ್ತವಾದ ಪೂರ್ವ ಸಂಸ್ಕಾರಗಳು ಮತ್ತು ಉತ್ತರ ಸಂಸ್ಕಾರಗಳಿಗೆ ಬಹಳ ಮಹತ್ವ ಇದೆ. ಇವುಗಳು ಕ್ಷೀಣಿಸಲು ಬಿಡಬಾರದು ಎಂದ ಅವರು, ಸಂಸ್ಕಾರಗಳನ್ನು ಉಪೇಕ್ಷೆ ಮಾಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು. ಹವ್ಯಕರ ಸಂಖ್ಯೆ, ಸಂಸ್ಕಾರ, ಸಂಘಟನೆ ಕ್ಷೀಣಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಶ್ರೀಗಳು ಇವುಗಳು ಕ್ಷೀಣಿಸಲು ಬಿಡಬಾರದು ಎಂದರು.
ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸಿದ ಘಟನೆಯನ್ನು ಪ್ರಸ್ತಾಪಿಸಿದ ಶ್ರೀಗಳು, ಜನಿವಾರ ಕತ್ತರಿಸಿದರೂ ಸಂಸ್ಕಾರ ಕತ್ತರಿಸಲು ಸಾಧ್ಯವಿಲ್ಲ. ಜನಿವಾರವನ್ನು ಬ್ರಾಹ್ಮಣರು ಮಾತ್ರವಲ್ಲ ಇನ್ನೂ ಅನೇಕ ಸಮುದಾಯದವರು ಧರಿಸುತ್ತಾರೆ. ಜನಿವಾರ ಕತ್ತರಿಸಿದರೆ ಬ್ರಾಹ್ಮಣರಿಗೆ ಮಾತ್ರವಲ್ಲ, ಜನಿವಾರ ಧರಿಸುವ ಎಲ್ಲ ಸಮುದಾಯದವರಿಗೂ ಅವಮಾನವಾದಂತೆ, ಧರ್ಮಾಚರಣೆಯ ವಯಕ್ತಿಕ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.