








ನೈಸರ್ಗಿಕ ಕೃಷಿ ಕಾರ್ಯಾಗಾರ: ಕೃಷಿ ಸಾಧಕರನ್ನು ಸನ್ಮಾನಿಸಿದ ಸಂಸದ ಕಾಗೇರಿ

ಬಿಜೆಪಿ ರೈತಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕುಮಟಾದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ಕಡಸಾಲಗದ್ದೆಯ ತೋಟದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಳುಮೆಣಸಿನ ಗಿಡಕ್ಕೆ ರಸಸಾರ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಸಂಸದರು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತಂತ್ರಜ್ಞಾನ ಹಾಗೂ ಐಟಿ ಕಂಪನಿಗಳು ಎಷ್ಟೇ ಬೆಳೆದರೂ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಾವೆಲ್ಲರೂ ಊಟ ಮಾಡಲು ರೈತರು ಬೆಳೆದ ಬೆಳೆಯೇ ಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿಯ ಮೂಲಕ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ. ಮೋದಿಯವರು ಪ್ರಧಾನಿಯಾಗಿ ದೇಶ ಮುನ್ನಡೆಸುತ್ತಿರುವ ಅವಧಿಯಲ್ಲಿ ರೈತರ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಮಣ್ಣಿನ ಪರೀಕ್ಷೆ ನಡೆಸಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ (ಮಣ್ಣಿನ ಆರೋಗ್ಯ ಕಾರ್ಡ್) ವಿತರಿಸಲಾಗಿದೆ. ಪ್ರತಿಯೊಬ್ಬ ರೈತರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅಂತ್ರವಳ್ಳಿಯಲ್ಲಿ ಎನ್.ಡಿ. ಹೆಗಡೆಯವರು 18 ರಿಂದ 20 ಎಕರೆ ಜಾಗದಲ್ಲಿ ಅತ್ಯುತ್ತಮವಾಗಿ ಕಾಳುಮೆಣಸು ಮತ್ತು ಅಡಿಕೆಯನ್ನು ಬೆಳೆದು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಈಗ ಎಲ್ಲೆಡೆ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದರು. ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಹಿಂದೆ ನಮ್ಮ ಹಿರಿಯರ ಕಾಲದಲ್ಲಿ ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ಉದ್ಯೋಗ ಕನಿಷ್ಠ ಎನ್ನುವ ಮನೋಭಾವ ಇತ್ತು. ಆದರೆ ಈಗ ಕಾಲ ಬದಲಾಗಿ ಉದ್ಯೋಗ ಉತ್ತಮ, ವ್ಯಾಪಾರ ಮಧ್ಯಮ, ಕೃಷಿ ಕನಿಷ್ಠ ಎನ್ನುವಂತಾಗಿದೆ. ಕೃಷಿಕರಿಗೆ ಹೆಣ್ಣು ಸಿಗುತ್ತಿಲ್ಲ, ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆಗಳಿಗೆ ನಾವು ಅನುಸರಿಸಿಸುತ್ತಿರುವ ಕೃಷಿ ಪದ್ಧತಿಯೇ ಮುಖ್ಯ ಕಾರಣ. ನಾವು ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಬಿಟ್ಟು ರಾಸಾಯನಿಕ ಕೃಷಿಗೆ ಮೊರೆ ಹೋದಾಗಿನಿಂದ ಹಿನ್ನಡೆ ಆರಂಭವಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಂತೆ ನಾವು ತಿನ್ನುವ ತರಕಾರಿ, ಹಣ್ಣುಗಳೆಲ್ಲವೂ ವಿಷಯುಕ್ತ ಮತ್ತು ರೋಗಕಾರಕವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿವಿಧ ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕೃಷಿಕರಾದ ನಾಗು ಗೌಡ ಕಡ್ನೀರು, ಜೇನು ಕೃಷಿಕ ಸಂತೋಷ ಹೆಗಡೆ ಶಿರಸಿ, ವಿಷ್ಣು ಜಟ್ಟು ಗೌಡ ಮೂರುರೂ, ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ, ಮಂಜುನಾಥ ಬೀರಾ ಗೌಡ ಕಂದೊಳ್ಳಿ, ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ, ಭತ್ತದ ವೈವಿಧ್ಯಮಯ ತಳಿ ಬೆಳೆದ ಸಾಧಕ ನಾಗರಾಜ ನಾಯ್ಕ ಕಾಗಲ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಗಣಪತಿ ಹೆಗಡೆ, ಕುಮಾರ ಭಟ್, ಮಾಜಿ ಜಿ.ಪಂ. ಸದಸ್ಯ ಗಜಾನನ ಪೈ, ಡಾ. ಜಿ.ಜಿ. ಹೆಗಡೆ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಎಲ್ಲಾ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು. ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ ವಂದಿಸಿದರು.

=======================


















