









ಡಾಕ್ಟರೇಟ್ ಪದವಿ ಪಡೆದ ಚಿಮನಳ್ಳಿ, ತೋಟದಮನೆಯ ಸುಬ್ರಹ್ಮಣ್ಯ ಭಟ್

ಪ್ರತಿಭಾಸಂಪನ್ನ ಯುವಕ ಯಲ್ಲಾಪುರ ತಾಲೂಕಿನ ಚಿಮ್ನಳ್ಳಿ ಸಮೀಪದ ತೋಟದಮನೆಯ ಕೇಶವ ಭಟ್ಟ ಹಾಗೂ ಸ್ನೇಹಲತಾ ಭಟ್ಟ ಅವರ ಸುಪುತ್ರ ಸುಬ್ರಹ್ಮಣ್ಯ ಭಟ್ಟ ಅವರಿಗೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಸಂಸ್ಥೆಯ ಆವರಣದಲ್ಲಿ ನಡೆದ ಸ್ನಾತಕಪದವಿ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಅವರು ಸುಬ್ರಹ್ಮಣ್ಯ ಭಟ್ಟ ಅವರಿಗೆ ಡಾಕ್ಟರೇಟ್ ಪದವಿ ಪದವಿ ಪ್ರದಾನ ಮಾಡಿದರು.

ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾದ ಸುಬ್ರಹ್ಮಣ್ಯ ಭಟ್ಟ ಅವರು ವೈದ್ಯನಾಗಿ ಸಮಾಜ ಸೇವೆ ಮಾಡುವ ಕನಸನ್ನು ಹೊಂದಿದ್ದರು. ಅವರ ಕನಸು ಈಗ ನನಸಾಗಿದೆ. ಡಾ.ಸುಬ್ರಹ್ಮಣ್ಯ ಭಟ್ಟ ಅವರ ಸಾಧನೆಗೆ ಸದಾ ಪ್ರೋತ್ಸಾಹಿಸುತ್ತಾ ಬೆನ್ನೆಲುಬಾಗಿ ನಿಂತ ತಂದೆ ಕೇಶವ ಭಟ್ಟ ಹಾಗೂ ತಾಯಿ ಸ್ನೇಹಲತಾ ಭಟ್ಟ ಅವರು ತಮ್ಮ ಮಗನ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಮಗನ ಮುಂದಿನ ಭವಿಷ್ಯಕ್ಕೆ ಶುಭಕೋರಿದ್ದಾರೆ. ಕುಟುಂಬ ವರ್ಗದವರೂ ಸಹ ತಮ್ಮ ಡಾ.ಸುಬ್ರಹ್ಮಣ್ಯ ಭಟ್ಟ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗನ ಈ ಸಾಧನೆಯ ಬಗ್ಗೆ ಸಾಹಿತಿ ಕೇಶವ ಭಟ್ಟ ಚಿಮ್ನಳ್ಳಿಯವರು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಪ್ರತಿನಿಧಿಯೊಂದಿಗೆ ತಮ್ಮ ಸಂಭ್ರಮವನ್ನು ಮತ್ತು ಮನದಾಳದ ಅನಿಸಿಕೆಯನ್ನು ಈ ಬರಹದ ಮೂಲಕ ಹಂಚಿಕೊಂಡಿದ್ದಾರೆ.
ನಮ್ಮ ಮಗ ಡಾ. ಸುಬ್ರಮಣ್ಯ ಭಟ್ಟ ಇವನಿಗೆ ಇಂದಿನ ದಿನ ಅವನ ಜೀವನದಲ್ಲಿ ಬಹಳ ಮಹತ್ವವಾದ ದಿನ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ತನ್ನ ಅಗಣಿತ ಪ್ರಯತ್ನದ ಮೂಲಕ ಉನ್ನತ ಪದವಿಯನ್ನು ಪಡೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತಂದೆ ತಾಯಿಗಳ ನಿರಂತರ ಪ್ರೋತ್ಸಾಹ ಮತ್ತು ಉತ್ಸಾಹದ ನುಡಿಗಳು ಎಷ್ಟೇ ಉತ್ತೇಜನ ಕೊಟ್ಟರೂ ಅವನ ಸ್ವಪ್ರಯತ್ನ ಮತ್ತು ಸಾಧಿಸುವ ಛಲ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಿದೆ ಎನ್ನುವುದನ್ನು ರುಜುವಾತು ಮಾಡಿದ್ದಾನೆ.

ತಾಯಿಯೇ ಮೊದಲ ಗುರು ಎನ್ನುವ ಉಕ್ತಿಯಂತೆ ನನ್ನ ಶ್ರೀಮತಿಯವರಾದ ಸ್ನೇಹಲತಾ ಭಟ್ಟ ಅವರ ನಿರಂತರ ಪ್ರಯತ್ನ, ಮಗನನ್ನು ಓದುವಿಕೆಯಲ್ಲಿ ತೊಡಗಿಸುವಿಕೆ, ತಾನೂ ಅವನ ಜೊತೆಗೆ ಓದುವುದರ ಒಂದು ಭಾಗವಾಗಿ ನಿರಂತರ ಕೈಜೋಡಿಸಿ, ಓದಿಸಿ ಪರಿಪೂರ್ಣತೆಯತ್ತ ಮಗನನ್ನು ಕೊಂಡೊಯ್ದು ಉನ್ನತ ಸ್ಥಾನದಲ್ಲಿ ಕೂರಿಸುವ ಹಂಬಲ ಇಂದು ಯಶಸ್ಸು ಕಂಡಿದೆ. ತಂದೆ ಎಷ್ಟೇ ನೈತಿಕ ಉತ್ತೇಜನ, ಆರ್ಥಿಕ ಉತ್ತೇಜನ ಕೊಟ್ಟರೂ ತಾಯಿಯ ಮಮತೆಯ ತೊಟ್ಟಿಲು,ಸಮಚಿತ್ತಭಾವ ಮತ್ತು ಪ್ರೌಢಿಮೆಯನ್ನು ಅನಾವರಣವಾಗಿಸಿದ್ದು ಸುಳ್ಳಲ್ಲ.!!

ನನ್ನ ವ್ಯವಹಾರದ ಏಳು-ಬೀಳುಗಳ ತಕ್ಷಣದ ಫಲಾನುಭವಿಗಳು ನನ್ನನ್ನೇ ನಂಬಿರುವ ನನ್ನ ಕುಟುಂಬವೇ ಸರಿ, ಕಠಿಣ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟ ನೆಂಟರು, ಇಷ್ಟರು, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
ನಡೆದುಬಂದ ದಾರಿಯಲ್ಲಿ ಕಿವಿಗೆ ಬಿದ್ದ ಟೀಕೆ-ಟಿಪ್ಪಣಿಗಳನ್ನು ಸಹಜವಾಗಿ ಸ್ವೀಕರಿಸಿದ್ದೇವೆ , ಸಾಧನೆಯ ಮೆಟ್ಟಿಲುಗಳನ್ನು ಹತ್ತಲು ಇವೆಲ್ಲವೂ ಸಹಕಾರಿಯಾದವು ಅಂತ ಭಾವಿಸಿದ್ದೇವೆ, ಕೊನೆಗೂ ನಮ್ಮವರು ಯಾರು ಅಂತ ತಿಳಿಯಲು ಬಹಳ ದಿನ ಬೇಕಾಯಿತು, ಅವರೆಲ್ಲರಿಗೂ ಸಾಸಿರ ನಮನಗಳು.
ಸುಬ್ರಮಣ್ಯ ಚಿಕ್ಕಮಗು ಇದ್ದಾಗಿನಿಂದ ನೀನು ಏನು ಓದಬೇಕು ಅಂದುಕೊಂದಿರುವೆ ಮುಂದೆ.? ಅಂತ ಅವನ ಭದ್ರಾವತಿಯ ಅಜ್ಜ- ಅಜ್ಜಿ ದಿವಂಗತ ಯಮುನಾ ಶಿರೂರು ಮತ್ತು ಗೋಪಾಲಕೃಷ್ಣ ಶಿರೂರು ಅವರು ಪದೆ ಪದೇ ಕೇಳಿದಾಗಲೂ ನಾನು ಡಾಕ್ಟರ್ ಆಗ್ತೀನಿ ಅಂತಾನೇ ಹೇಳ್ತಾಇದ್ದ , ಅದು ಇಂದು ನಿಜವಾಗಿದೆ.
ಒಂದು ವರ್ಷದ ಹಿಂದೆ ನಮ್ಮನ್ನು ಅಗಲಿದ ತಾಯಿ ಸರಸ್ವತಿ ವೆಂಕಟರಮಣ ಭಟ್ಟ ಅಂದರೆ ಸುಬ್ರಮಣ್ಯನ ಅಜ್ಜಿಯು ಕೊನೆಯದಿನಗಳಲ್ಲಿ ಮೊಮ್ಮಗನ ನೋಡಬೇಕು, ಮಾತಾಡಬೇಕು ಅನ್ನುವ ಆತುರವನ್ನು ಅವರ ಆಣತಿಯನ್ನು ಪೂರೈಸಿದ್ದೆ. ಹಾಸನದಿಂದ ಬೆಂಗಳೂರಿಗೆ ಬಂದು ಆರೋಗ್ಯವಿಚಾರಿಸಿ ಅಜ್ಜಿಯ ಆಶೀರ್ವಾದ ಪಡೆದಿದ್ದ ನನ್ನ ಮಗ ಡಾ.ಸುಬ್ರಮಣ್ಯ ಭಟ್ಟ, ಅದೇ ಕೊನೆಯ ಭೇಟಿ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ,
ಅವರು ಮೊಮ್ಮಗನ ತಲೆಯನ್ನು ನೇವರಿಸಿ ಕಳುಹಿಸಿದ ಆ ದಿನ ಮರೆಯಲಾದೀತೇ. ಅವರಿಗೂ ಈ ಪಿಳ್ಳೆ ಡಾಕ್ಟರ್ ತುಂಬಾ ಇಷ್ಟವಾದ ಮಗುವಾಗಿತ್ತು. ನಾವೆಲ್ಲಾ ಹಳ್ಳಿಯವರು, ಕಷ್ಟ ಕಾರ್ಪಣ್ಯಗಳನ್ನು ನುಂಗಿದವರು, ಎಲ್ಲಿ ಬಿದ್ದೆವೋ ಅಲ್ಲೇ ಎದ್ದವರು. ನಮ್ಮ ಕಷ್ಟಗಳೆಲ್ಲ ಮುಂದಿನ ತಲೆಮಾರಿಗೆ ಬಾರದಿರಲಿ ಅಂದುಕೊಂಡವರು, ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ ಆದರೆ ಅಜ್ಜಿ ಬಯಸಿದಂತೆ, ಅವನ ತಾಯಿಯ ಆಸೆಯಂತೆ ನಮ್ಮ ಮಗ ಡಾಕ್ಟರ್ ಆಗಿದ್ದಾನೆ.
ನಮ್ಮ ಸಂಪೂರ್ಣ ಬೆಂಬಲ, ಹಂಬಲ ಸರ್ವದಾ ನಿನ್ನ ಬೆನ್ನ ಹಿಂದೆ ಇದೆ, ನಿನ್ನ ಮುಂದಿನ ಸ್ನಾತಕೋತ್ತರ (ಎಂ.ಡಿ.)ಕಲಿಕೆ ಸುಗಮವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಯದ್ಭಾವಂ ತದ್ಭವತಿ
ಸೇವೆಯೇ ನಿನ್ನ ಧ್ಯೇಯವಾಗಿರಲಿ ಮಗನೇ,
ಸದಾ ಒಳಿತನೇ ಬಯಸುವ ನಿನ್ನ ತಂದೆ -ತಾಯಿ.
ಕೇಶವ ಭಟ್ಟ, ಚಿಮ್ನಳ್ಳಿ, ತೋಟದಮನೆ
ಸ್ನೇಹಲತಾ ಕೇಶವ ಭಟ್ಟ

===================


















