ಹಲಸು ಮೇಳಕ್ಕೆ ಉದ್ಯಮಿ ಬಾಲಕೃಷ್ಣ ನಾಯಕ ಚಾಲನೆ: ಸಾರ್ವಜನಿಕರಿಂದ ಉತ್ತಮ ಸ್ಪಂದನೆ
ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಗುರುವಾರ ಹಲಸು ಮೇಳಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವೇ ಹಲಸುಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.
ಉದ್ಯಮಿ ಬಾಲಕೃಷ್ಣ ನಾಯಕ ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿ, ಮೊದಲಬಾರಿಗೆ ಯಲ್ಲಾಪುರದಲ್ಲಿ ಹಲಸಿನ ಮೇಳವು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಬಹಳ ಸಂತಸವಾಗಿದೆ. ಹಲಸು ಬೆಳೆಗಾರರಿಗೆ ಮತ್ತು ಹಲಸಿನ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಈ ಹಲಸಿನ ಮೇಳವು ಸಹಕಾರಿಯಾಗಿದ್ದು, ಹಲಸಿನ ಮೌಲ್ಯವರ್ಧನೆಗೆ ಬಹಳ ಅನುಕೂಲವಾಗಿದೆ.
ಹಲಸಿನ ವೈವಿಧ್ಯಮಯ ಉತ್ಪನ್ನಗಳು ಮತ್ತು ವಿವಿಧ ಸ್ವದೇಶಿ ವಸ್ತುಗಳನ್ನು ಖರೀದಿಸುವ ಆಸಕ್ತರಿಗೂ ಈ ಮೇಳವು ವೇದಿಕೆ ಒದಗಿಸಿದೆ. ತಾಲೂಕಿನ ಜನರು ಹಲಸು ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಬಾಲಕೃಷ್ಣ ನಾಯಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಹಲಸು ಮೇಳದ ಆಯೋಜಕರಾದ ದೀಪಕ ಶೆಣೈ, ರಮೇಶ ಶಿವಮೊಗ್ಗ ಮುಂತಾದವರು ಇದ್ದರು.
ಬಾಯಲ್ಲಿ ನೀರೂರಿಸುವ ಹಲಸಿನ ಖಾದ್ಯಗಳು
ಯಲ್ಲಾಪುರದಲ್ಲಿ ನಡೆಯುತ್ತಿರುವ ಹಲಸು ಮೇಳದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಲಾದ ವಿವಿಧ ಖಾದ್ಯಗಳು ಗಮನ ಸೆಳೆಯುತ್ತಿವೆ.
ಹಲಸಿನ ಹಣ್ಣಿನ ಜಿಲೇಬಿ, ಹಲಸಿನ ಹಣ್ಣಿನ ಹೋಳಿಗೆ, ಹಲಸಿನ ಹಣ್ಣಿನ ಕಡಬು, ಹಲಸಿನ ಹಣ್ಣಿನ ಹಪ್ಪಳ, ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಉಪ್ಪಿನ ಕಾಯಿ ಹಾಗೂ ಇನ್ನೂ ಹಲವಾರು ಖಾದ್ಯಗಳನ್ನು ಸ್ಥಳದಲ್ಲಿಯೇ ತಯಾರಿಸಿ ಕೊಡುತ್ತಿರುವುದು ವಿಶೇಷವಾಗಿದೆ.
ವಿವಿಧ ತಳಿಯ ಹಲಸಿನ ಹಣ್ಣುಗಳು
ಹಲಸಿನ ಮೇಳದಲ್ಲಿ ವಿವಿಧ ಅಪರೂಪ ತಳಿಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಚಂದ್ರ ಬಕ್ಕೆಹಣ್ಣು, ವಿಯೇಟ್ನಾಂ ಹಲಸು, ತುಮಕೂರ ಹಲಸು, ರುದ್ರಾಕ್ಷಿ ಹಲಸು ಮುಂತಾದ ಹಲಸಿನ ತಳಿಯ ಹಣ್ಣುಗಳ ಮಾರಾಟ ನಡೆಯುತ್ತಿದೆ.
ವಿವಿಧ ತಳಿಯ ಹಲಸಿನ ಸಸಿಗಳ ಮಾರಾಟ
ಹಲಸಿನ ಮೇಳದಲ್ಲಿ ವಿವಿಧ ತಳಿಯ ಹಲಸಿನ ತಳಿಗಳ ಸಸಿಯ ಮಾರಾಟವೂ ಇದೆ. ಜೊತೆಯಲ್ಲಿ ವಿವಿಧ ತಳಿಯ ಮಾವಿನ ಸಸಿಗಳು ಮತ್ತು ಹೂವಿನ ಸಸಿಗಳ ಮಾರಾಟ, ತರಕಾರಿ ಬೀಜಗಳ ಮಾರಾಟ ಇದೆ. ಶನಿವಾರದವರೆಗೆ ಈ ಹಲಸು ಮೇಳ ನಡೆಯಲಿದೆ.
ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು, ಒಟ್ಟಾರೆಯಾಗಿ ಹಲಸು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.