ದೇಶಪಾಂಡೆಯವರಿಗೆ ಉಪಮುಖ್ಯಮಂತ್ರಿ ಅಥವಾ ಮಂತ್ರಿ ಸ್ಥಾನ ನೀಡಿ: ಬೆಂಬಲಿಗರ ಆಗ್ರಹ
ಹಳಿಯಾಳ ಶಾಸಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದು,ಸಚಿವರಾಗಿಯೂ ಕಾರ್ಯನಿರ್ವಹಿಸಿ ಜನಮನ್ನಣೆ ಪಡೆದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅವರಿಗೆ ಕೂಡಲೇ ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನವನ್ನು ನೀಡಲೇ ಬೇಕು ಎಂದು ದೇಶಪಾಂಡೆಯವರ ಅಭಿಮಾನಿ ಬಳಗದ ಪ್ರಮುಖರು ಯಲ್ಲಾಪುರದಲ್ಲಿ ಮಂಗಳವಾರ ಆಗ್ರಹಿಸಿದ್ದಾರೆ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ಎನ್.ಗಾಂವ್ಕಾರ್ ಮಾತನಾಡಿ, ಸಚಿವ ಸಂಪುಟದ ಮೊದಲ ಹಂತದಲ್ಲಿಯೇ ಹಿರಿಯ ಶಾಸಕರಾದ ದೇಶಪಾಂಡೆಯವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ನಮ್ಮದಾಗಿತ್ತು. ಆದರೆ ಸಿಗಲಿಲ್ಲ. ಇದರಿಂದ ನಮಗೆಲ್ಲ ಅತೀವ ಬೇಸರವಾಗಿದೆ.
ಡಿ.ಎನ್.ಗಾಂವ್ಕಾರ್
ಮುತ್ಸದ್ದಿ ರಾಜಕಾರಣಿಯಾದ ದೇಶಪಾಂಡೆಯವರು ರಾಜ್ಯದ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಕೂಡಲೇ ದೇಶಪಾಂಡೆಯವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
ಕೈಸರ್ ಸೈಯದ್ ಅಲಿ
ದೇಶಪಾಂಡೆ ಅಭಿಮಾನಿ ಬಳಗದ ಪ್ರಮುಖರಾದ ಜಿಲ್ಲಾ ಕಾಂಗ್ರೆಸ್ ಸಮೀತಿಯ ಸದಸ್ಯ ಕೈಸರ್ ಸೈಯದ್ ಅಲಿ ಮಾತನಾಡಿ, ಮಾಜಿ ಸಚಿವರು, ಆಡಳಿತದಲ್ಲಿ ಅಪಾರ ಅನುಭವವನ್ನು ಹೊಂದಿದ ಜನನಾಯಕರಾದ ಆರ್.ವಿ.ದೇಶಪಾಂಡೆಯವರಿಗೆ ತಕ್ಷಣ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಂದನ ಬಾಳಗಿ,ಎನ್.ಎನ್.ಹೆಬ್ಬಾರ್,ವಿ.ಟಿ.ಭಾಗ್ವತ್, ವಿ.ವಿ.ಜೋಷಿ, ಬಾಬಾಜಾನ್ ಶೇಖ್, ಬಾಬು ಸಿದ್ದಿ, ಅಕ್ಷಯ ರೇವಣ್ಕರ್, ವಿ.ಜಿ.ಭಾಗ್ವತ್, ರಾಘವೇಂದ್ರ ಕುಣಬಿ, ಜಿ.ವಿ.ಭಟ್ಟ, ಅಣ್ಣಪ್ಪ ನಾಯ್ಕ, ಶೇಖರ ಗೋಸಾವಿ, ಅಶ್ಫಕ್ ಪಟೇಲ್, ನವೀದ್ ಖಾನ್, ಇದ್ದರು.