



ಕೆಲಸಕ್ಕೆ ಬೇಡಿಕೆ ಸಲ್ಲಿಸಿ, ಖಾತರಿ ಉದ್ಯೋಗ ಪಡೆಯಿರಿ


ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವ್ಯಾಪಕ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಯಲ್ಲಾಪುರ ತಾಲೂಕಿನ ಉದ್ಯೋಗ ಆಕಾಂಕ್ಷಿಗಳು ತಮ್ಮ ಗ್ರಾಮ ಪಂಚಾಯತಿಗಳಿಗೆ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದರೆ ಕಡ್ಡಾಯವಾಗಿ ಉದ್ಯೋಗ ನೀಡಲು ತಾಲೂಕು ಪಂಚಾಯತಿಯಿಂದ ಸೂಚಿಸಲಾಗಿದೆ ಎಂದು ಯಲ್ಲಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಕೂಲಿಕಾರರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ನರೇಗಾ ಯೋಜನೆ ಸಹಕಾರಿಯಾಗಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಕೂಡಲೇ ಅವರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುವುದು. ಕೆಲಸಕ್ಕೆ ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗಾಗಿ ಉದ್ಯೋಗ ನೀಡಲಾಗುವುದು. ಒಂದು ವೇಳೆ 15 ದಿನದೊಳಗಾಗಿ ಉದ್ಯೋಗ ನೀಡಲು ವಿಫಲವಾದರೆ ನಿರುದ್ಯೋಗ ಭತ್ಯೆ ಸಹ ನೀಡಬೇಕಾಗುತ್ತದೆ. ಹೀಗಾಗಿ ಕೂಲಿಕಾರರು ತಮ್ಮ ಗ್ರಾಮದ ವ್ಯಾಪ್ತಿಯಲ್ಲಿಯೇ ಕೆಲಸ ಪಡೆಯಲು ಉತ್ತಮ ಅವಕಾಶವಿದೆ. ಯೋಜನೆ ಅಡಿಯಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನ ವೇತನ, ದಿನಕ್ಕೆ 370 ರೂಪಾಯಿ ಕೂಲಿ ದರ ನಿಗದಿಪಡಿಸಿದ್ದು, ಕೆಲಸ ಮಾಡಿದ 15 ದಿನದೊಳಗೆ ಸರ್ಕಾರದಿಂದ ಕೂಲಿ ಮೊತ್ತ ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಕೂಲಿ ಪಾವತಿಸಲಾಗುವುದು.

ಹಿಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕೈಗೊಳ್ಳಲು ಆಯುಕ್ತಾಲಯದಿಂದ ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಕೂಲಿಕಾರರ ಬೇಡಿಕೆಗೆ ಅನುಗುಣವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹಿಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗಿರುವ ಕಾಮಗಾರಿಗಳನ್ನು ಹಾಗೂ ಪ್ರಸಕ್ತ ಚಾಲ್ತಿಯಲ್ಲಿರುವ ಕಾಮಗಾರಿಗಳಲ್ಲಿ ಕೆಲಸ ಒದಗಿಸಲು ಗ್ರಾಮ ಪಂಚಾಯತಿಗಳಿಂದ ಕ್ರಮ ವಹಿಸಲಾಗುತ್ತಿದೆ.
ಜೂನ್ ವರೆಗೆ 41 ಸಾವಿರ ಮಾನವ ದಿನ ಸೃಜನೆ ಗುರಿ: ಜಿಲ್ಲಾ ಪಂಚಾಯತಿಯಿಂದ ತಾಲೂಕಿಗೆ ಜೂನ್ ಅಂತ್ಯದವರೆಗೆ 41 ಸಾವಿರ ಮಾನವ ದಿನ ಸೃಜಿಸುವ ಗುರಿ ನೀಡಲಾಗಿದೆ. ತಾಲೂಕಿನಲ್ಲಿ 2025-26ನೇ ಸಾಲಿನಲ್ಲಿ ಆಲ್ನೈನ್‍ನಲ್ಲಿ 2076 ಕಾಮಗಾರಿಗಳಿಗೆ ಅನುಮೊದನೆಯಾಗಿತ್ತು. ಆದರೆ ಅನೇಕ ಕಾಮಗಾರಿಗಳು ಪ್ರಾರಂಭವಾಗಿರುವುದಿಲ್ಲ,

ಆದರೆ ಈಗ ಹಿಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳನ್ನು ಪ್ರಾರಂಭಿಸಿ, ಉದ್ಯೋಗ ನೀಡಲು ಆಯುಕ್ತಾಲಯದಿಂದ ಸೂಚಿಸಲಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗಳಲ್ಲಿ 80ಕ್ಕೂ ಅಧಿಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಕೃಷಿ ಕಾಲುವೆ, ಕೃಷಿ ಹೊಂಡ, ರಸ್ತೆ ಅಭಿವೃದ್ಧಿ, ಚರಂಡಿ, ತಡೆ ಗೋಡೆ ಸೇರಿದಂತೆ ಸಮುದಾಯ ಆಸ್ತಿಗಳ ನಿರ್ಮಾಣ ಹಾಗೂ ವೈಯುಕ್ತಿಕ ಜಾನುವಾರು ಶೆಡ್, ವಸತಿ ಕಾಮಗಾರಿಗಳು ಚಾಲ್ತಿಯಲ್ಲಿವೆ.

ಕೂಲಿಕಾರರಿಗೆ ಕೆಲಸ ನೀಡುವ ಮೂಲಕ ಗ್ರಾಮೀಣ ಜನರ ಜೀವನೋಪಾಯಕ್ಕೆ ಕ್ರಮ ವಹಿಸಲು ತಾಲೂಕು ಪಂಚಾಯತಿಯ ಉದ್ಯೋಗ ಖಾತರಿ ಸಹಾಯಕ ನಿರ್ದೇಶಕರಿಗೆ, ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಮನರೇಗಾ ತಾಂತ್ರಿಕ ಸಿಬ್ಬಂದಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದಾರೆ.
ಯಲ್ಲಾಪುರ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಾನಾ ಕಾರಣಗಳಿಂದ ಜನರು ಕೆಲಸಕ್ಕೆ ಬರಲು ಹಿಂದೆಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಉದ್ಯೋಗ ಪಡೆಯುವುದಕ್ಕಾಗಲಿ ಅಥವಾ ಕೂಲಿ ಹಣ ಪಡೆಯುವುದಕ್ಕಾಗಲಿ ಯಾವುದೇ ತೊಂದರೆ ಇರುವುದಿಲ್ಲ.

ಒಂದು ವೇಳೆ ತಾಂತ್ರಿಕ ಸಮಸ್ಯೆ ಎದುರಾದರೂ ಅವುಗಳನ್ನು ಸಕಾಲಕ್ಕೆ ನಿವಾರಿಸಿ ಸರಿಪಡಿಸಲು ನುರಿತ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗ್ರಾಮೀಣ ಭಾಗದ ಕೂಲಿಕಾರರು ಇಂತಹ ಜನಪರ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯಲ್ಲಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ್ ತಿಳಿಸಿದ್ದಾರೆ.
ಎಲ್ಲ ಕೂಲಿಕಾರರ ಇ-ಕೆವೈಸಿ ಕಡ್ಡಾಯ: ಜುಲೈ 1ರಿಂದ ವಿಬಿ-ಜಿ ರಾಮ್-ಜಿ ಯೋಜನೆ ಜಾರಿಗೆ ಬರಲಿದ್ದು ಮುಂಬರುವ ಯೋಜನೆಯಲ್ಲಿ ಯಾವುದೇ ತೊಂದರೆಯಾಗದಂತೆ ಯೋಜನೆಯ ಲಾಭ ಪಡೆಯಬೇಕಾದರೆ ಪ್ರಸ್ತುತ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಎಲ್ಲ ಕೂಲಿಕಾರರು ಜೂನ್ 30ರ ಒಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ನೆಟವರ್ಕ್ ಸಮಸ್ಯೆಯಿದ್ದು, ಜನರ ಮನೆ ಬಾಗಿಲಿಗೆ ಹೋಗಿ ಕೆವೈಸಿ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಜನರು ಸ್ವಯಂ ಪ್ರೇರಿತವಾಗಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳಬೇಕು.



















