ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿ: ಅಧಿಕಾರಿಗಳಿಗೆ ಸಂಸದ ಕಾಗೇರಿ ಕಟ್ಟುನಿಟ್ಟಿನ ಸೂಚನೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸೇವೆಗಳ ಕುರಿತಂತೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಶುಕ್ರವಾರ ಶಿರಸಿಯ ತಮ್ಮ ಕಾರ್ಯಾಲಯದಲ್ಲಿ ಬಿಎಸ್‍ಎನ್‍ಎಲ್ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಬಿಎಸ್‍ಎನ್‍ಎಲ್ ಮಂಗಳೂರು ವಿಭಾಗದ ಮಹಾಪ್ರಬಂಧಕ ಹೇಮಂತ್ ಸದಾಶಿವ್, ಕಾರವಾರ ವಿಭಾಗದ ಉಪ ಮಹಾಪ್ರಬಂಧಕ ಮಲ್ಲಿಕಾರ್ಜುನ್ ತಾಳಿಕೋಟಿ ಸೇರಿದಂತೆ ಪ್ರಮುಖ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಕೇಂದ್ರ ಸರ್ಕಾರದ 4ಜಿ ಸ್ಯಾಚುರೇಶನ್ ಯೋಜನೆಯಡಿ ಜಿಲ್ಲೆಯಲ್ಲಿ ಎದುರಾಗಿದ್ದ ಹಲವಾರು ಅಡೆತಡೆಗಳನ್ನು ನಿವಾರಿಸಿ ಈಗಾಗಲೇ 200ಕ್ಕೂ ಹೆಚ್ಚು ನೂತನ ಟವರ್‍ಗಳು ಯಶಸ್ವಿಯಾಗಿ ಕಾರ್ಯಾರಂಭ ಮಾಡಲು ಸತತ ಪ್ರಯತ್ನ ಹಾಗೂ ಸಹಕಾರ ನೀಡಲಾಗಿದೆ ಎಂದು ಸ್ಮರಿಸಿದರು. ಇದೇ ವೇಳೆ, ಕ್ಷೇತ್ರದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಪ್ರಮುಖ ಪ್ರವಾಸಿ ತಾಣಗಳಿಗೆ ನೂತನ ಬಿಎಸ್‍ಎನ್‍ಎಲ್ ಟವರ್‍ಗಳು ಮಂಜೂರಾಗಿರುವುದನ್ನು ಅವರು ಪ್ರಸ್ತಾಪಿಸಿದರು.
ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸಚಿವರು ಹಾಗೂ ಬಿಎಸ್‍ಎನ್‍ಎಲ್ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯ ನೆಟ್‍ವರ್ಕ್ ಸಮಸ್ಯೆಗಳ ಕುರಿತು ಚರ್ಚಿಸಿದ್ದರ ಫಲವಾಗಿ, ನೆಟ್‍ವರ್ಕ್ ಇಲ್ಲದ ಗ್ರಾಮಗಳನ್ನು ಗುರುತಿಸಿ ಸರ್ವೆ ನಡೆಸಲು ಮತ್ತು ಅಗತ್ಯವಿರುವ ಕಡೆ ಹೊಸ ಟವರ್‍ಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಕೇಂದ್ರದಿಂದ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಂಪರ್ಕ ರಹಿತ ಪ್ರದೇಶಗಳನ್ನು ಗುರುತಿಸಿ ನೂತನ ಟವರ್‍ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ತ್ವರಿತವಾಗಿ ಸಮಗ್ರ ವರದಿ ಸಲ್ಲಿಸಬೇಕೆಂದು ಸಂಸದರು ನಿರ್ದೇಶಿಸಿದರು.
ಪ್ರಸ್ತುತ ಕೆಲವು ಭಾಗಗಳಲ್ಲಿ ವಿವಿಧ ತಾಂತ್ರಿಕ ದೋಷಗಳು ಹಾಗೂ ವಿದ್ಯುತ್ ಪೂರೈಕೆಯ ವ್ಯತ್ಯಯದಿಂದಾಗಿ ಟವರ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ಅಡೆತಡೆಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಿ ನೆಟ್‍ವರ್ಕ್ ಸುಸ್ಥಿತಿಗೆ ತರಬೇಕು ಎಂದು ಆದೇಶಿಸಿದರು. ರಾಜ್ಯದಲ್ಲೇ ಅತಿ ಹೆಚ್ಚು ಬಿಎಸ್‍ಎನ್‍ಎಲ್ ಟವರ್ ಗಳು ನಮ್ಮ ಜಿಲ್ಲೆಯಲ್ಲಿದ್ದು, ಗ್ರಾಮೀಣ ಹಾಗೂ ಮಲೆನಾಡು ಭಾಗದ ಬಹುತೇಕ ನಾಗರಿಕರು ಸಂಪೂರ್ಣವಾಗಿ ಬಿಎಸ್‍ಎನ್‍ಎಲ್ ಅನ್ನೇ ನಂಬಿಕೊಂಡಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ, ಆಡಳಿತ, ಆರ್ಥಿಕ ವಹಿವಾಟು ಸೇರಿದಂತೆ ಪ್ರತಿಯೊಂದು ಕಾರ್ಯಕ್ಕೂ ಮೊಬೈಲ್ ಸಂಪರ್ಕ ಅತ್ಯಗತ್ಯವಾಗಿದ್ದು, ಜನರಿಗೆ ಯಾವುದೇ ಅಡಚಣೆಯಿಲ್ಲದೆ ಗುಣಮಟ್ಟದ ಸೇವೆ ಒದಗಿಸುವುದು ಇಲಾಖೆಯ ಕರ್ತವ್ಯವಾಗಿದೆ.
ಜಿಲ್ಲೆಯ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯಿಂದಾಗಿ ಕೆಲವು ದುರ್ಗಮ ಪ್ರದೇಶಗಳಲ್ಲಿ ಉಂಟಾಗುತ್ತಿರುವ ನೆಟ್‍ವರ್ಕ್ ಸಮಸ್ಯೆಗಳನ್ನು ನಿವಾರಿಸಲು ವಿಶೇಷ ಆದ್ಯತೆ ನೀಡಬೇಕು ಹಾಗೂ ಜಿಲ್ಲೆಯಾದ್ಯಂತ ನೆಟ್‍ವರ್ಕ್ ಸ್ಥಿರತೆ ಕಾಪಾಡಲು ಕೈಗೊಂಡ ಕ್ರಮಗಳ ಕುರಿತು ನಿಗದಿತ ಕಾಲಮಿತಿಯೊಳಗೆ ಸಮಗ್ರ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸಂಸದರು ಸ್ಪಷ್ಟವಾಗಿ ಸೂಚಿಸಿದರು.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!