ಯಲ್ಲಾಪುರ ತಾಲೂಕಿನ ಮಲವಳ್ಳಿಯಲ್ಲಿ ಮಾವಿನಮನೆ ಗ್ರಾಮಪಂಚಾಯತದಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಯಲ್ಲಾಪುರ-ಮಲವಳ್ಳಿ ಮಾರ್ಗದ ಸಾರಿಗೆ ಸೇವೆಯ ಅವ್ಯವಸ್ಥೆ ಕುರಿತು ಸಭೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು. ಸ್ಥಳೀಯ ಸಾರ್ವಜನಿಕರು, ವಿದ್ಯಾರ್ಥಿಗಳು ಅಗಸ್ಟ 4 ರಂದು ಬಾಸಲದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಲು ಕರೆಕೊಟ್ಟ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಯಲ್ಲಾಪುರ ಬಸ್ ಡಿಪೋದಅಧಿಕಾರಿಗಳು ಸಭೆಗೆ ಆಗಮಿಸಿದ್ದರು.
ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿನ ಐದು ಗ್ರಾಮಗಳಿಗೆ ಕೇವಲ ಒಂದೇ ಒಂದು ಬಸ್ ಮಾರ್ಗ ನೀಡಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಅತೀಯಾದ ಪ್ರಯಾಣಿಕರದಟ್ಟಣೆ ಉಂಟಾಗುತ್ತಿದೆ. ಮಹಿಳೆಯರು, ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ಬಸ್ ಏರಲಾರದ ಪರಿಸ್ಥಿತಿ ಉಂಟಾಗಿದೆ. ಬಹುತೇಕ ದಿನಗಳಲ್ಲಿ ವಾಗಳ್ಳಿ, ಬಾಸಲ್ ಭಾಗದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾರದೇ ಬಿಟ್ಟು ಹೋಗುತ್ತಿದ್ದಾರೆ, ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೂ ಪರಿಣಾಮ ಉಂಟಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಇದನ್ನು ಸರಿಪಡಿಸಲು ಮಲವಳ್ಳಿ, ಬೇಣದಗುಳೇ ಮಾರ್ಗಕ್ಕೆ ಒಂದು ಮತ್ತು ಬಾರೆ, ಶಿಗೇಕೇರಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಇನ್ನೊಂದು ವಸತಿ ಬಸ್ಸನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಶಿಗೇಕೇರಿ ಮಾರ್ಗದ ವಸತಿ ಬಸ್ಸನ್ನು ಬಂಕೊಳ್ಳಿಯವರೆಗೆ ಮುಂದುವರೆಸಬೇಕು. ಕೆಲವೊಮ್ಮೆ ವಿವಿಧ ಕಾರಣಹೇಳಿ ಅರ್ಧಮಾರ್ಗದಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹೋಗುವ ಡ್ರೈವರ್, ಕಂಡಕ್ಟರ್ ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು,
ಇದು ಯಲ್ಲಾಪುರದಿಂದ ಸುಮಾರು 56 ಕಿ.ಮೀ. ದೂರದ ಮಾರ್ಗವಾಗಿದ್ದರಿಂದ ಸುಸ್ಥಿತಿಯಲ್ಲಿರುವ ಬಸ್ಸುಗಳನ್ನೇ ನೀಡಬೇಕು. ಮತ್ತು ಪ್ರತಿ ಗ್ರಾಮಸಭೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು ಎಂದು ಆಗ್ರಹಿಸಲಾಯಿತು.
ಹದಗೆಟ್ಟ ರಸ್ತೆ ಮತ್ತು ಬಸ್ಸುಗಳ ನಿರ್ವಹಣೆಯ ಕೊರತೆಯಿಂದಾಗಿ ಬಸ್ಸುಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಕಳೆದ ಸುಮಾರು ಹತ್ತು ದಿನಗಳಲ್ಲಿ 5 ಬಾರಿ ಮಲವಳ್ಳಿ ಮಾರ್ಗದ ಬಸ್ಸುಗಳು ಹಾಳಾಗಿವೆ. ಸಾರಿಗೆ ಸಂಸ್ಥೆ ಗುತ್ತಿಗೆ ಅಧಾರದಲ್ಲಿ ಖಾಸಗಿ ಡ್ರೈವರ್ ಗಳನ್ನು ನೇಮಿಸಿಕೊಂಡಿದ್ದು ಅಂತಹ ಚಾಲಕರು ನಿಷ್ಕಾಳಜಿ ಮತ್ತು ಅತೀವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದಾರೆ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ವ್ಯವಸ್ಥೆಯ ಸುಧಾರಣೆ ಕುರಿತು ಸಾಮೂಹಿಕವಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.