ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು, ಮನೆಯ ಒಳಗೆ ಇದ್ದ ಕಪಾಟನ್ನು ಒಡೆದು ಕಪಾಟಿನಲ್ಲಿ ಇಟ್ಟಿದ್ದ ಬಂಗಾರ, ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜು.16ರಂದು ಹಳಿಯಾಳ ಪಟ್ಟಣದ ನಿರ್ಮಲಾ ವಿರೂಪಾಕ್ಷಿ ಗೌಡ ಅವರ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಹಳಿಯಾಳ ಪೊಲೀಸರು ಮನೆಕಳ್ಳತನ ನಡೆಸಿದ್ದ ಆರೋಪಿಗಳಾದ ಪುಣೆಯ ಲಖನ ತಂದೆ ಅಶೋಕ ಕುಲಕರ್ಣಿ, ಸೊಲ್ಲಾಪುರದ ಸಂದೀಪ ತಂದೆ ದಿಲೀಪ್ ಲವಟಿ, ವಿವೇಕ ತಂದೆ ಶಿವಪ್ಪ ಕುಂಬಾರ, ಪಂಡರಪುರದ ಅಜೀಜ್ ತಂದೆ ದಾದಾಫಿರ್ ಮನಗುಳಿ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಯಲ್ಲಾಪುರ, ಹಳಿಯಾಳ, ಕುಂದಾಪುರ ಮುಂತಾದೆಡೆ ಮನೆಗಳ್ಳತನ ಮಾಡಿರುವುದನ್ನು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 7.95 ಲಕ್ಷ ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ್ದ 4 ಲಕ್ಷ ರೂ ಮೌಲ್ಯದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಲಖನ್ ಕುಲಕರ್ಣಿಯ ಮೇಲೆ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ 28 ಪ್ರಕರಣಗಳು ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಸಹ ಪ್ರಕರಣಗಳು ದಾಖಲಾಗಿವೆ. ಮೂರು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇನ್ನೊಬ್ಬ ಆರೋಪಿ ಅಜೀಜ್ ಮನಗುಳಿ ಮೇಲೆ ಕರ್ನಾಟಕದಲ್ಲಿ 2 ಪ್ರಕರಣಗಳು ಮಹರಾಷ್ಟ್ರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ಇವೆ. ಆರೋಪಿ ಸಂದೀಪ್ ಮೇಲೆ ಮಹಾರಾಷ್ಟ್ರ ರಾಜ್ಯದಲ್ಲಿ ಸುಲಿಗೆ ಮತ್ತು ಕಳ್ಳತನ ಪ್ರಕರಣಗಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.