ಸ್ನೇಹ ಹಾಗೂ ಬಾಂಧವ್ಯ ವೃದ್ಧಿಗೆ ಸ್ಪರ್ಧೆಗಳು ಸಹಕಾರಿ: ರಾಜು ಭಟ್
ಸ್ನೇಹ ಹಾಗೂ ಬಾಂಧವ್ಯ ವೃದ್ಧಿಗೆ ಸ್ಪರ್ಧೆಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಿದ್ದಾಪುರ ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಚೇತನಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜು ಭಟ್ ಹೇಳಿದರು. ಕಾಲೇಜಿನಲ್ಲಿ ನಡೆದ ಸಿದ್ದಾಪುರ ತಾಲೂಕಾ ಮಟ್ಟದ ವಿವಿಧ ಸಾಂಸ್ಕೃತಿಕಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಎಸ್.ವಿ.ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಾಜಾರಾಮ್ ದಿಕ್ಷೀತ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ರೀತಿಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನವಾಗುತ್ತವೆ ಎಂದರು.
ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ, ದೇಶ ಭಕ್ತಿಗೀತೆ ಸ್ಪರ್ಧೆ ನಡೆಸಲಾಯಿತು. ತಾಲೂಕಿನ 20 ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಪಾರಿತೋಷಕ ವಿತರಿಸಲಾಯಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪನ್ಯಾಸಕಿ ಮುಸ್ಕಾನ ಸೌದಾಗರ ಸ್ವಾಗತಿಸಿದರು, ಪ್ರತಿಮಾ ನಾಯ್ಕ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು, ವಿಘ್ನೇಶ್ವರ ಭಟ್ಟ ನಿರೂಪಿಸಿದರು. ಉಪನ್ಯಾಸಕಿ ಸ್ವಾತಿ ಹೆಗಡೆ ವಂದಿಸಿದರು.