ರೆಡ್ ಅಲರ್ಟ್: ಭಾರೀ ಮಳೆ, ಎಚ್ಚರವಹಿಸಲು ಜಿಲ್ಲಾಧಿಕಾರಿ ಸೂಚನೆ
ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ, ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿ ಚಂಡಮಾರುತ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ದಿನಾಂಕ 17-8-2025 ರಿಂದ 19-8-2025 ರ ವರೆಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ ಘೋಷಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುತ್ತದೆ. ಸಾರ್ವಜನಿಕರು ಹಾಗೂ ಮೀನುಗಾರರು ಈ ಮುಂದಿನ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮಿಪ್ರಿಯಾ ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದ್ದು ಮುಂದಿನ ಹವಾಮಾನ ಮುನ್ಸೂಚನೆಯನ್ವಯ ಮೀನುಗಾರಿಕೆಯನ್ನು ನಡೆಸಲು ತಿಳಿಸಿದೆ. ಸದರಿ ದಿನಗಳಲ್ಲಿ ಸಾರ್ವಜನಿಕರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಪ್ರವಾಸಿಗರು, ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.
ನದಿ ತೀರದಲ್ಲಿ ವಾಸಿಸುವವರು ಹಠಾತ್ ಪ್ರವಾಹ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವುದು. ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯ ದಡದಲ್ಲಿ ಯಾವುದೇ ಸಮಯದಲ್ಲಿ ಪ್ರವಾಹ ಉಂಟಾಗಬಹುದಾದ ಸಾಧ್ಯತೆ ಇರುವುದರಿಂದ ಅಂತಹ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು.
ಮಳೆಯ ಜೊತೆಗೆ ಗಾಳಿ ಕೂಡಾ 40-60 ಕಿ.ಮೀ ವೇಗದಿಂದ ಬೀಸುವ ಸಾಧ್ಯತೆಯಿರುವುದರಿಂದ ಅಪಾಯಕಾರಿ ಮರಗಳಿರುವ ಮನೆಗಳಲ್ಲಿಯ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಮತ್ತು ಮರಗಳ ಕೆಳಗೆ ಅಶ್ರಯ ಪಡೆಯದಂತೆ ಸೂಚಿಸಲಾಗಿದೆ. ಗುಡ್ಡದ ಇಳಿಜಾರಿನ ಪ್ರದೇಶದಲ್ಲಿ ವಾಸಿಸುವರು ಕೂಡಾ ಮಳೆಯ ತೀವ್ರತೆಯನುಸಾರ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು.
ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸುವುದು. ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಾರದು.
ತುರ್ತು ಸೇವೆಗೆ 24*7 ಕಂಟ್ರೋಲ್ ರೂಮ್ ಟೋಲ್ ಪ್ರೀ ಸಂಖ್ಯೆ 08382-229857 ಮತ್ತು ವಾಟ್ಸಪ್ ಸಂಖ್ಯೆ 9483511015 ಸಂಪರ್ಕಿಸುವoತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ
ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಆ.18 ಸೋಮವಾರ ಕಾರವಾರ, ಅ0ಕೋಲಾ, ಕುಮಟಾ,ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ,ಯಲ್ಲಾಪುರ, ಜೊಯ್ಡಾ, ದಾಂಡೇಲಿ ಈ ಹತ್ತು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.