








21-8-2025 ಗುರುವಾರ ಯಲ್ಲಾಪುರ
ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಮನವಿ

ರಾಜ್ಯದ ಅಡಿಕೆ ಬೆಳೆಗಾರರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕೇಂದ್ರ ಸಚಿವರು ಹಾಗೂ ಕರ್ನಾಟಕದ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಲೋಕಸಭಾ ಸದಸ್ಯರು ಮತ್ತು ಅಡಿಕೆ ಬೆಳೆಗಾರರ ಸಂಘಗಳ ಪ್ರತಿನಿಧಿಗಳ ನಿಯೋಗವು ದೆಹಲಿಯಲ್ಲಿ ಗುರುವಾರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾಡಿ ಮನವಿ ಸಲ್ಲಿಸಿತು.

ಮನವಿಯಲ್ಲಿ ಪ್ರಮುಖವಾಗಿ ಹಳದಿ ಎಲೆ ರೋಗ ಮತ್ತು ಕೊಳೆ ರೋಗದಂತಹ ಮಾರಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ಹಾಗೂ ಅಡಿಕೆ ಬೆಳೆ ಮತ್ತು ಮಾನವನ ಆರೋಗ್ಯದ ಕುರಿತು ವೈಜ್ಞಾನಿಕ ವರದಿಯನ್ನು ತುರ್ತಾಗಿ ತರಿಸಿಕೊಳ್ಳಬೇಕು ಎಂದು ಸಚಿವರಿಗೆ ಒತ್ತಾಯಿಸಿತು.
ಅಡಿಕೆಯ ಅಕ್ರಮ ಆಮದನ್ನು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವಂತೆ ನಿಯೋಗವು ಸರ್ಕಾರವನ್ನು ಒತ್ತಾಯಿಸಿತು.

ಅಕ್ರಮ ವ್ಯಾಪಾರವನ್ನು ಹತ್ತಿಕ್ಕಲು ದೊಡ್ಡ ಪ್ರಮಾಣದ ಅಡಿಕೆ ಸಾಗಣೆಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸುವಂತೆ ಮತ್ತು ಅಡಿಕೆ ಆಮದು ಮಾಡುವ ಮೊದಲು ಸ್ಥಳೀಯ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ, ಟಿಎಸ್‍ಎಸ್, ಮಾಮ್ಕೋಸ್ ಹಾಗೂ ಇನ್ನಿತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುವಂತೆ ಮನವಿ ಮಾಡಿದರು.
ರೈತರಿಗೆ ಅನುಕೂಲವಾಗುವಂತೆ ಅಡಿಕೆಯಲ್ಲಿನ ತೇವಾಂಶ ಮಟ್ಟವನ್ನು ಶೇ.7 ರಿಂದ ಶೇ.11-12ಕ್ಕೆ ಹೆಚ್ಚಿಸುವಂತೆ ಎಫ್‍ಎಸ್‍ಎಸ್‍ಎಐಗೆ ಮನವಿ ಸಲ್ಲಿಸಲಾಯಿತು. ಸೂರ್ಯನ ಬೆಳಕಿನಲ್ಲಿ ಶೇ.7 ತೇವಾಂಶವನ್ನು ಕಾಯ್ದುಕೊಳ್ಳುವುದು ರೈತರಿಗೆ ಕಷ್ಟಕರ ಎಂದು ನಿಯೋಗವು ವಿವರಿಸಿತು. ಅಲ್ಲದೆ, ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ನಿಗದಿಪಡಿಸಿರುವ ಅಡಿಕೆ ಗ್ರೇಡಿಂಗ್ ಮಾನದಂಡಗಳನ್ನು ಪುನರ್ ಪರಿಶೀಲಿಸಿ, ಸ್ಥಳೀಯ ಭೌಗೋಳಿಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೋರಿದರು.
ಸಹಕಾರಿ ಸಂಸ್ಥೆಗಳಿಗೆ ನೀಡುವ ಸಾಲಗಳ ಮೇಲಿನ ಬಡ್ಡಿದರ ಕಡಿಮೆ ಮಾಡಿ, ಕಾರ್ಪೊರೇಟ್‌ಗಳ ಮಾದರಿಯಲ್ಲಿ ಕ್ರೆಡಿಟ್ ರೇಟಿಂಗ್ ಅನ್ವಯಿಸದೆ ಹೊಸ ಮಾನದಂಡಗಳನ್ನು ರೂಪಿಸುವಂತೆ ನಿಯೋಗವು ಸಚಿವರನ್ನು ಒತ್ತಾಯಿಸಿತು. ಇದರಿಂದ ರೈತರಿಗೆ ಸುಲಭವಾಗಿ ಸಾಲ ದೊರೆಯಲು ಸಹಾಯವಾಗುತ್ತದೆ ಎಂದು ನಿಯೋಗ ಹೇಳಿತು.
ಅಡಿಕೆಗೆ ಬಳಸುವ ಕಾಪರ್ ಸಲ್ಫೇಟ್ ಮೇಲಿನ ಜಿಎಸ್‍ಟಿ ದರವನ್ನು ಶೇ.18 ರಿಂದ ಶೇ.5ಕ್ಕೆ ಮತ್ತು ಅಡಿಕೆ ಮೇಲಿನ ಜಿಎಸ್‍ಟಿ ದರವನ್ನು ಇಳಿಸುವಂತೆ ಕೋರಿಕೆ ಸಲ್ಲಿಸಲಾಯಿತು.
ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮಾ ಸೌಲಭ್ಯಗಳನ್ನು ಬಲಪಡಿಸುವಂತೆ ನಿಯೋಗವು ಮನವಿ ಮಾಡಿತು. ಇದರ ಜೊತೆಗೆ, ರೈತರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಪ್ಪಿಸಲು ಸಹಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಹಣಕಾಸು ಒದಗಿಸಿ ಗೋದಾಮಿನ ಸೌಲಭ್ಯಗಳನ್ನು ನಿರ್ಮಿಸಲು ನೆರವಾಗುವಂತೆ ಕೋರಲಾಯಿತು.
ಅಮೆರಿಕಾದಲ್ಲಿ ಅಡಿಕೆ ಎಲೆಗಳಿಂದ ಮಾಡಿದ ಬಯೋಡಿಗ್ರೇಡಬಲ್ ಪ್ಲೇಟ್‍ಗಳನ್ನು ಕ್ಯಾನ್ಸರ್-ಕಾರಕ ಎಂದು ಘೋಷಿಸಿರುವುದರಿಂದ ಉಂಟಾದ ರಫ್ತು ಸಮಸ್ಯೆಗಳನ್ನು ಬಗೆಹರಿಸಲು ವೈಜ್ಞಾನಿಕ ಅಧ್ಯಯನ ನಡೆಸುವಂತೆ ಒತ್ತಾಯಿಸಲಾಯಿತು. ಕಾರ್ಬನ್ ಫೈಬರ್ ದೋಟಿ ಮತ್ತು ಇತರೆ ಕೃಷಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ವಿನಂತಿಸಲಾಯಿತು.
ನಿಯೋಗದ ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಎಲ್ಲಾ ವಿಷಯಗಳನ್ನು ಪರಿಶೀಲಿಸಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್ ಡಿ ಕುಮಾರಸ್ವಾಮಿ, ವಿ ಸೋಮಣ್ಣ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ, ಬಿ ವೈ ರಾಘವೇಂದ್ರ, ಬ್ರಿಜೇಶ್ ಚೌಟ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಭಾ ಮಲ್ಲಿಕಾರ್ಜುನ್ ಶಾಸಕರು ಮತ್ತು ಅಡಿಕೆ ಮಹಾಮಂಡಳದ ಅಧ್ಯಕ್ಷರಾದ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡಗಿ, ಸೇರಿದಂತೆ ಅಡಿಕೆ ಬೆಳೆಗಾರರ ವಿವಿಧ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS





















