ಉತ್ತಮ ಪ್ರಗತಿ ಸಾಧಿಸಿದ ವಿಕಾಸ ಬ್ಯಾಂಕ್, 1.27 ಕೋಟಿ ನಿವ್ವಳ ಲಾಭ: ಮುರಳಿ ಹೆಗಡೆ
29ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ, ಯಲ್ಲಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ವಿಕಾಸ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ಪ್ರಸಕ್ತ ವರ್ಷದಲ್ಲಿ 1.27 ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.
ಅವರು ಗುರುವಾರ ಬ್ಯಾಂಕಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ವಿಕಾಸ ಬ್ಯಾಂಕು ಉತ್ತಮ ಸಾಧನೆಯೊಂದಿಗೆ, ಗ್ರಾಹಕರ ಸೇವಾ ದೃಷ್ಟಿಯಿಂದ ಉತ್ತಮ ಹೆಸರು ಪಡೆದುಕೊಂಡಿದೆ. ಕಾಯ್ದೆಗಳಲ್ಲಿ ಆದ ಬದಲಾವಣೆ, ಹೆಚ್ಚುತ್ತಿರುವ ಆರ್ಥಿಕ ಸಂಸ್ಥೆಗಳು, ಸ್ಪರ್ಧಾತ್ಮಕ ಬೆಳವಣಿಗೆಗಳ ನಡುವೆಯೂ ನಮ್ಮ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಿಕಾಸ ಬ್ಯಾಂಕು 10,853 ಸದಸ್ಯರನ್ನು ಹೊಂದಿದ್ದು, ಕಾಯ್ದಿಟ್ಟ ನಿಧಿಗಳು, ಠೇವು, ಸಾಲ ಮತ್ತು ಮುಂಗಡಗಳು, ಗುಂತಾವಣೆಗಳು, ದುಡಿಯುವ ಭಂಡವಾಳ ಮುಂತಾದ ವಿಭಾಗದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಗತಿ ಸಾಧಿಸಿದೆ. ಸದಸ್ಯರಿಗೆ ಶೇ.6 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.
ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕು ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಆನ್ಲೈನ್ ಬ್ಯಾಂಕಿಗ್ ವ್ಯವಸ್ಥೆ, ಯುಟಿಲಿಟಿ ತಂತ್ರಾಂಶ ಸೇರಿದಂತೆ ವಿವಿಧ ಆಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಎ.ಟಿ.ಎಂ, ಸಿಡಿಎಂ, ಇ-ಕಾಮರ್ಸ್, ಪಿಒಎಸ್, ಮೊಬೈಲ್ ಬ್ಯಾಂಕಿಂಗ್ ಮುಂತಾದ ವಿವಿಧ ಡಿಜಿಟಲ್ ಸೇವೆಗಳನ್ನು ನೀಡುತ್ತಿದೆ. ಸದ್ಯದಲ್ಲಿಯೇ ಯುಪಿಐ ಸೇವೆ ನೀಡಲಾಗುವುದು. ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.
ನಮ್ಮ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆಯು ಆ.25 ಸೋಮವಾರ ಮಧ್ಯಾಹ್ನ 4 ಗಂಟೆಗೆ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಲಿದೆ. ಸದಸ್ಯರು ಸಭೆಗೆ ಆಗಮಿಸಿ ಸಲಹೆ,ಸೂಚನೆ ನೀಡಲು ಕೋರುತ್ತೇನೆ :- ಮುರಳಿ ಹೆಗಡೆ ಅಧ್ಯಕ್ಷರು ವಿಕಾಸ ಬ್ಯಾಂಕ್ ಯಲ್ಲಾಪುರ
ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ನರಸಿಂಹ ಭಟ್ಟ, ವ್ಯವಸ್ಥಾಪಕ ನಿರ್ದೇಶಕ ಉಮೇಶ ಭಾಗ್ವತ್, ನಿರ್ದೇಶಕರಾದ ಸುಬ್ರಾಯ ಭಾಗ್ವತ್, ಶಿವರಾಮ ಭಟ್ಟ, ಪ್ರಿಯಾ ಗಾಂವ್ಕಾರ್ ಇದ್ದರು.