ಯಲ್ಲಾಪುರ ತಾಲೂಕಿನ ಅರಬೈಲ್ ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ, ಸೃಜನಶೀಲ ಕವಯತ್ರಿ ಶಿವಲೀಲಾ ಹುಣಸಗಿ ಪ್ರಸಕ್ತ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶುಕ್ರವಾರ ಶಿರಸಿಯಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಶಿವಲೀಲಾ ಹುಣಸಗಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಕಾವ್ಯಾರಾಣಿ, ಡಿವೈಎಸ್ಪಿ ಗೀತಾ ಪಾಟೀಲ್, ಡಿ.ಡಿ.ಪಿ.ಐ. ಡಿ.ಎಸ್.ನಾಯ್ಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ತಾ.ಪಂ.ಆಡಳಿತಾಧಿಕಾರಿ ಬಿ.ಪಿ.ಸತೀಶ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ, ತಹಶೀಲ್ದಾರ ಪಟ್ಟರಾಜ ಗೌಡ, ನಗರಸಭೆ ಪೌರಾಯುಕ್ತ ಪಿ.ಎಂ.ಚನ್ನಪ್ಪನವರ್ ಮುಂತಾದವರು ಇದ್ದರು. ಶಿವಲೀಲಾ ಅವರಿಗೆ ಪ್ರಶಸ್ತಿಪತ್ರ, ನಗದು ಬಹುಮಾನ ನೀಡಲಾಯಿತು.

ಶಿವಲೀಲಾ ಹುಣಸಗಿ ಬಹುಮುಖ ಪ್ರತಿಭೆಯ ಕವಯಿತ್ರಿ. ಮೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚಾಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಪಡೆದಿರುವ ಇವರು ಬರಹದಲ್ಲಷ್ಟೇ ಅಲ್ಲ ಭಾಷಣದಲ್ಲೂ ಸೈ ಎನಿಸಿಕೊಂಡಿದ್ದಾರೆ.ಇದ್ದುದರಲ್ಲೆ ಖುಷಿಪಡುವ ಕುಟುಂಬದಲ್ಲಿ ಬೆಳೆದ ಶಿವಲೀಲಾ ನಿಜಕ್ಕೂ ಕಷ್ಟಗಳನ್ನು ಹತ್ತಿರದಿಂದ ನೋಡಿ ಬೆಳೆದರು. ಸಾಹಿತ್ಯದ ಆಸಕ್ತಿಯನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡು, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಓದಿನಲ್ಲಿ
ಸದಾ ಮುಂದು. ಆಶು ಭಾಷಣ, ಸಿದ್ದ ಭಾಷಣ, ಸ್ವ ರಚಿತ ಕವನ ರಚನೆಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದವರು.

1998 ರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿ ಹುಣಶೆಟ್ಟಿಕೊಪ್ಪದಲ್ಲಿ. ನಂತರ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಸ್ತುತ ಅರಬೈಲ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ,ಕವನ, ನಾಟಕ, ಅಂಕಣ ಬರಹ,ರುಬಾಯಿ, ಟಂಕಾ, ವಚನಗಳು,ಬಿಡಿ ಲೇಖನಗಳು, ಕಲಿಕೆಗೆ ಸಂಬಂಧಿಸಿದಂತೆ ನಾವೀನ್ಯತೆಯ ಚಟುವಟಿಕೆಗಳು,ಪುಸ್ತಕ ಜೋಳಿಗೆ,ಹುಟ್ಟು ಹಬ್ಬಕ್ಕೊಂದು ಗಿಡ ನೆಡುವುದು. ಜಾಗೃತಿ ಕಾರ್ಯಕ್ರಮ ಬೀದಿನಾಟಕಗಳು, ಚಿಣ್ಣರ ಕಲರವ ಶಾಲಾ ಮಕ್ಕಳ ಹನಿ ಕವನ ಸಂಕಲನ ಪ್ರಕಟ.ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃತಿ ರಚನೆ ಮಾಡಿದ್ದು.ಈಗಾಗಲೇ ಹತ್ತು ಕೃತಿಗಳನ್ನೂ ಹೊರತಂದಿದ್ದಾರೆ.

ಆದರ್ಶ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಇವರು ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳ ಸಂಘಟಕಿಯೂ ಆಗಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉತ್ತರ ಕನ್ನಡದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವರು. ಎಲ್ಲರನ್ನು ಅತ್ಯಂತ ಪ್ರೀತಿಯಿಂದ, ಗೌರವದಿಂದ ಕಾಣುವ ಹೃದಯವಂತೆ’ ಇವರು. ಅನೇಕ ಸ್ಪರ್ಧೆಗಳಲ್ಲಿ ಬಹುಮಾನಿತರೂ, ವಿವಿಧ ಸಂಸ್ಥೆಗಳಿಂದ ಸನ್ಮಾನಿತರೂ ಆಗಿರುವ ಶಿವಲೀಲಾ ಕನ್ನಡ ಸಾರಸ್ವತ ಲೋಕದ ಹೆಮ್ಮೆ. ಇವರಿಗೆ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading