ಗ್ರಾಮೀಣ ಪ್ರತಿಭೆಯ ಅಭೂತಪೂರ್ವ ಸಾಧನೆ: ನಾಲ್ಕು ಬಂಗಾರದ ಪದಕ ಪಡೆದ ಶ್ರೀಲಕ್ಷ್ಮೀ ಹೆಗಡೆ
ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಮೇಲಿನಕುಂಭತ್ತಿಯ ಶ್ರೀಲಕ್ಷ್ಮೀ ವೆಂಕಟ್ರಮಣ ಹೆಗಡೆ ಕರ್ನಾಟಕ ವಿಶ್ವವಿದ್ಯಾಲಯದ 75ನೆ ವಾರ್ಷಿಕ ಘಟಿಕೋತ್ಸವದಲ್ಲಿ ಎಂ.ಕಾಂ.ನಲ್ಲಿ 4 ಬಂಗಾರದ ಪದಕ ಹಾಗೂ 3 ನಗದು ಬಹುಮಾನ ಪಡೆದಿದ್ದಾಳೆ.
ಗುರುವಾರ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರಿಂದ ಇವಳು ಬಂಗಾರದ ಪದಕ ಹಾಗೂ ಬಹುಮಾನ ಪಡೆದಳು. ಶ್ರೀಲಕ್ಷ್ಮೀ ಹೆಗಡೆ ಮೇಲಿನಕುಂಭತ್ತಿಯ ಕೃಷಿಕ ದಂಪತಿಗಳಾದ ಮುಕಾಂಬೆ ಮತ್ತು ವೆಂಕಟ್ರಮಣ ಹೆಗಡೆ ಇವರ ಪುತ್ರಿ.
ಅಪ್ಪಟ ಗ್ರಾಮೀಣ ಪ್ರತಿಭೆ : ಅಭೂತಪೂರ್ವ ಸಾಧನೆ
ಶ್ರೀಲಕ್ಷ್ಮೀ ಹೆಗಡೆ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.
ಶ್ರೀಲಕ್ಷ್ಮೀ ಹೆಗಡೆ ಯಲ್ಲಾಪುರ ತಾಲೂಕಿನ ಕುಗ್ರಾಮವಾದ ಮೊಟ್ಟೆಗದ್ದೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ, ನಂದೊಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿದ ಗ್ರಾಮೀಣ ಪ್ರತಿಭೆ. ಕೃಷಿಕನಪುತ್ರಿಯು ಇಂದು 4 ಬಂಗಾರದ ಪದಕದ ಒಡತಿ.
ಪ್ರತಿಭಾನ್ವಿತಳಾದ ಇವಳ ಈ ಸಾಧನೆಗೆ ಇವಳ ಪೋಷಕರು ಸಂಬಂಧಿಕರು ಹಾಗೂ ಪ್ರಾಧ್ಯಾಪಕರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.