ಧರ್ಮ ಸಂರಕ್ಷಣಾ ಸಭೆ: ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಖಂಡನೆ
ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಹಲವಾರು ರಂಗಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆದ ನೋವು ಅಪಾರ. ಧರ್ಮಸ್ಥಳದ ವಿರೋಧಿಗಳು ನಡೆಸಿದ ಅಪಪ್ರಚಾರದಿಂದ ಅವರಿಗಾದಷ್ಟೆ ನೋವು ಕ್ಷೇತ್ರದ ಎಲ್ಲಾ ಶ್ರದ್ಧಾ ವಂತ ಭಕ್ತರಿಗೂ ಆಗಿದೆ. ಈಗ ನಾವೆಲ್ಲರೂ ಧರ್ಮದ ಪರವಾಗಿ, ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಘಟ್ಟಿಯಾಗಿ ನಿಂತು ಹೋರಾಟ ನಡೆಸಬೇಕು. ಆ ಮೂಲಕ ನಾವು ಹೆಗ್ಗಡೆ ಯವರೊಂದಿಗೆ ಇದ್ದೇವೆ ಎಂದು ಸಾರಿ ಹೇಳಬೇಕು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಸಿದ್ದಾಪುರ ತಾಲೂಕಿನ ನಾಣಿಕಟ್ಟಾದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆ ಹಾಗೂ ಧರ್ಮಸ್ಥಳ ವಿರುದ್ಧದ ಅಪಪ್ರಚಾರ ನಡೆಸುತ್ತಿರುವುದನ್ನು ಪ್ರತಿಭಟಿಸಿ, ನಾಣಿಕಟ್ಟ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ್ದ ಬೃಹತ್ ಮೆರವಣಿಗೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ದುಷ್ಟ ಶಕ್ತಿಗಳು ಸುಮ್ಮನೆ ಇರುವವರಲ್ಲ. ಇದೆ ಪರಿಸ್ಥಿತಿ ಮುಂದಿನ ದಿನ ನಮ್ಮ ಊರಿನ ದೇವಸ್ಥಾನಗಳಿಗೂ ಬರಬಹುದು. ಹಾಗಾಗಿ ಎಲ್ಲಾ ಹಿಂದೂಗಳು ಎಚ್ಚರಿಕೆಯಿಂದ, ಜಾಗೃತರಾಗಿರಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಉಪೇಂದ್ರ ಪೈ ಮಾತನಾಡಿ, ನಮ್ಮ ಹಿಂದುಗಳನ್ನು ಒಡೆಯುವ ಕೆಲಸ ನಿರಂತರ ನಡೆಯುತ್ತಿದೆ, ಹಾಗಾಗಿ ಪ್ರತಿಯೊಂದು ಜಾತಿಗಳನ್ನು ಬೇರ್ಪಡಿಸುತ್ತಾ, ನಮ್ಮಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಇವರ ಒಳಸಂಚಿಗೆ ಬಲಿಯಾಗದೆ ನಾವು ಒಗ್ಗಟ್ಟಿನಿಂದ ಇರಬೇಕು. ಹಾಗಾಗಿ ನಮ್ಮ ದೇವಾಲಯಗಳಲ್ಲಿ ವಾರಕ್ಕೋ ಒಮ್ಮೆಯಾದರೂ ಸೇರುತ್ತಾ ಇರಬೇಕು. ಹಾಗಾದಲ್ಲಿ ಮಾತ್ರ ಉಳಿವು ಸಾಧ್ಯ, ನಮ್ಮನ್ನು ನಾವೇ ರಕ್ಷಿಸಿ ಕೊಳ್ಳಬೇಕು ಎಂದರು. ಸಭೆಯ ಅಧ್ಯಕತೆಯನ್ನು ಎಂ ಎಂ ಹೆಗಡೆ ಹಂಗಾರಖಂಡ ವಹಿಸಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಿ ಅಪವಿತ್ರಮಾಡುತ್ತಿರುವವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮವಾಗಬೇಕೆಂದು ರಾಜ್ಯಪಾಲರಿಗೆ ಆಗ್ರಹಿಸಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಭಾಭವನ ನಾಣಿಕಟ್ಟಾದಲ್ಲಿ ನಾಣಿಕಟ್ಟಾ ಗ್ರಾಮ ಸಮುದಾಯಗಳ ದೇವಾಲಯಗಳು, ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು , ಹಿಂದೂ ಬಾಂಧವರಿಂದ ಗ್ರಾಮ ಪಂಚಾಯತಕ್ಕೆ ಭೇಟಿ ನೀಡಿ ಮನವಿ ನೀಡಲಾಯಿತು. ಸ್ಥಳೀಯ ಪ್ರಮುಖರು ಇದ್ದರು.