










12-9-2025 ಶುಕ್ರವಾರ ಯಲ್ಲಾಪುರ
ಸಿದ್ದಾಪುರ,ಬನವಾಸಿಯನ್ನು ಸಾಗರಕ್ಕೆ ಸೇರಿಸುವ ಬೇಳೂರು ಹೋರಾಟಕ್ಕೆ ಅನಂತಮೂರ್ತಿ ವಿರೋಧ

ಸಿದ್ದಾಪುರ ತಾಲೂಕು ಹಾಗೂ ಬನವಾಸಿಯನ್ನು ಸೇರ್ಪಡೆಗೊಳಿಸಿ ಸಾಗರ ಜಿಲ್ಲೆ ರಚನೆಗೆ ನಮ್ಮ ವಿರೋಧವಿದ್ದು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಇದೆ. ಆದರೂ ಈ ಪ್ರಯತ್ನ ಮುಂದುವರೆದರೆ ಪಕ್ಷಾತೀತ ಹೋರಾಟ ನಡೆಸುತ್ತೇವೆ ಎಂದು ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಸಿದರು.

ಅವರು ಶುಕ್ರವಾರ ಶಿರಸಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 30 ವರ್ಷಗಳಿಂದ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಒಳಗೊಂಡು ಶಿರಸಿ ಜಿಲ್ಲೆಯಾಗಬೇಕೆಂಬ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರವು ಡಿ.31 ರ ಒಳಗಡೆ ತಾಲೂಕು ರಚನೆ ಹಾಗೂ ಜಿಲ್ಲೆ ರಚನೆ ಪಟ್ಟಿ ನೀಡಿ ಎಂದು ಕೇಳಿರುವುದನ್ನು ನಾವು ಕೇಳಿ ಸಂತೋಷಗೊಂಡಿದ್ದೆವು. ಶಿರಸಿ ಜಿಲ್ಲೆಯಾಗುತ್ತದೆ ಎಂಬ ವಿಶ್ವಾವಿತ್ತು. ಈ ಹೋರಾಟ ಕೆಡಿಸಬೇಕೆಂದು ಕೆಲವರು ಸಿದ್ದಾಪುರ ಹಾಗೂ ಬನವಾಸಿ ಸೇರಿಸಿಕೊಂಡು ಸಾಗರ ಜಿಲ್ಲೆಯನ್ನಾಗಿ ಮಾಡಲು ಹೊರಟಿದ್ದಾರೆ.
ಸಾಗರ ಶಾಸಕ ಗೋಪಾಲಕೃಷ್ಣ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ಸಭೆಯೂ ನಡೆಯುತ್ತಿದೆ. ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಕೂಗು ತೀವ್ರವಾಗಿ, ಪಕ್ಷಾತೀಯ ಹೋರಾಟ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತವಾಗಬೇಕು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿಯಾಗಿ ಶಿರಸಿ ಪ್ರತ್ಯೇಕ ಜಿಲ್ಲೆಯಾಗಲು ನಮ್ಮ ಜತೆ ಕೈಜೋಡಿಸಬೇಕು ಎಂದು ವಿನಂತಿಸಿದಾಗ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ವಿನಂತಿಸಿದಾಗ ಅವರೂ ಹೋರಾಟಕ್ಕೆ ಬೆಂಬಲ ನೀಡಿದ್ದರು. ಕೆಲ ದಿನಗಳಿಂದ ಸಿದ್ದಾಪುರ ಹಾಗೂ ಬನವಾಸಿ ಭಾಗವನ್ನು ಸಾಗರಕ್ಕೆ ಸೇರ್ಪಡಿಸಿ, ಜಿಲ್ಲೆ ಮಾಡಲು ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯದರ್ಶಿ ಎಂ.ಎಂ.ಭಟ್ಟ ಕಾರೇಕೊಪ್ಪ ಮಾತನಾಡಿ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರ ಜಿಲ್ಲೆ ಮಾಡಲು ಹೊರಟಿದ್ದಾರೆ. 7 ತಾಲೂಕು ಶಿವಮೊಗ್ಗ ಹತ್ತಿರವಾಗಿದ್ದು, ಉತ್ತರಕನ್ನಡದ ಭೌಗೋಳಿಕ ಪರಿಸ್ಥಿತಿ, ಇಲ್ಲಿಯ ಹೋರಾಟವನ್ನು ಗಮನಿಸಬೇಕು. ಘಟ್ಟದ ಮೇಲಿನ ತಾಲೂಕಿನ ನಾವೆಲ್ಲರೂ ಒಂದು ಕುಟುಂಬದ ರೀತಿಯಲ್ಲಿ ಇದ್ದೇವೆ. ಶಿರಸಿ ಪ್ರತ್ಯೇಕ ಜಿಲ್ಲೆಗೆ ಸಾಗರದವರು ಸಹಕಾರ ನೀಡಬೇಕು ಎಂದರು.
ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಶಿವಮೊಗ್ಗ, ಸಾಗರ ಪ್ರದೇಶದವರು ಇದ್ದ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ. ಬದಲಾಗಿ ಉತ್ತರಕನ್ನಡ ಜಿಲ್ಲೆಯ ತಾಲೂಕನ್ನು ಸೇರ್ಪಡೆಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಅದು ಸಾಧ್ಯವೂ ಇಲ್ಲ. ನಮ್ಮಿಂದ ಸಿದ್ದಾಪುರ ಹಾಗೂ ಬನವಾಸಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು. ಹಿರಿಯ ಧುರೀಣ ರಮೇಶ ದುಭಾಶಿ ಮಾತನಾಡಿದರು.

ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಸಹಜ. ಆದರೆ ಜಿಲ್ಲೆಯ ಅಸ್ಮಿತೆ ಪ್ರಶ್ನೆ ಬಂದಾಗ, ಪಕ್ಷಬೇಧ ಬದಿಗಿಟ್ಟು ನಾವೆಲ್ಲರೂ ಒಂದಾಗಿ ಹೋರಾಟ ಮಾಡುತ್ತೇವೆ. ಶಾಸಕ ಭೀಮಣ್ಣ ಹಾಗು ಸಂಸದ ಕಾಗೇರಿಯವರು ನಮ್ಮ ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಒಂದಾಗಿ ಹೋರಾಟ ಮಾಡಿದ್ದಲ್ಲಿ ಜಿಲ್ಲೆಯಾಗುವುದು ನಿಶ್ಚಿತ
-ಅನಂತಮೂರ್ತಿ ಹೆಗಡೆ, ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS





















