ಕಂಟೇನರ್ಲಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಬೈಕ್ ಹಾಗೂ ಕಂಟೇನರ್ಲಾರಿಯ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರನು ಸ್ಥಳದಲ್ಲೇ ಮೃತಪಟ್ಟು, ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಅಲಕೇರಿವಾಡಾ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಯಲ್ಲಾಪುರ ತಾಲೂಕಿನ ಬೈಲಂದೂರಿನ 45 ವರ್ಷದ ಗೌಂಡಿ ಕೆಲಸದ ಚಾಯಪ್ಪ ಸೋಮಾಪುರಕರ್ ಎಂದು ಗುರುತಿಸಲಾಗಿದ್ದು, ಬೈಕ್ ಹಿಂಬದಿ ಕುಳಿತಿದ್ದ ಬೈಲಂದೂರಿನ 45 ವರ್ಷದ ಪ್ರಭಾಕರ ತಂದೆ ಗಂಗಾಧರ ಸೊಮಾಪುರಕರ್ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ಬೈಕ್ ಸವಾರ ಚಾಯಪ್ಪ ಸೋಮಾಪುರಕರ್ ತನ್ನ ಬೈಕ್ ಅನ್ನು ಕಿರವತ್ತಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಮುಂದೆ ಹೋಗುತ್ತಿದ್ದ ಯಾವುದೋ ವಾಹನವನ್ನು ಓವರ್ ಟೇಕ್ ಮಾಡಿ ಬೈಕ್ ಚಲಾಯಿಸುವ ಸಂದರ್ಭದಲ್ಲಿ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರನ ತಲೆಯ ಮೇಲೆ ಲಾರಿಯ ಚಕ್ರ ಹಾಯ್ದುಹೋಗಿದ್ದು ಬೈಕ್ ಸವಾರನು ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.