ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ
ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ಪ್ರಸಕ್ತ ಸಾಲಿನ ಯಲ್ಲಾಪುರ ತಾಲೂಕಾ ಮಟ್ಟದ ಪ್ರಶಿಕ್ಷಣ ಕಾರ್ಯಕ್ರಮವು ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲೆಯ ಸಭಾಭವನದಲ್ಲಿ ಬುಧವಾರ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಗವದ್ಗಿತಾ ಅಭಿಯಾನವು ಪರಿಣಾಮಕಾರಿಯಾಗಿ ಅನುಷ್ಠಾನವಾಗುವ ಮೂಲಕ ಎಲ್ಲೆಡೆಯೂ ತಲುಪುವಂತಾಗಲಿ.
ಭಗವದ್ಗೀತೆಯ ಮಹತ್ವವು ಮಕ್ಕಳಿಗೆ ಅರಿವಾಗಬೇಕು. ಮಕ್ಕಳು ಭಗವದ್ಗಿತಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಳಮದ್ದಳೆ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ ಮಾತನಾಡಿ, ಭಗವದ್ಗೀತೆಯನ್ನು ನಿತ್ಯ ಪಠಣ ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುತ್ತದೆ. ಜೀವನ ಸಾರ್ಥಕವಾಗುತ್ತದೆ. ಭಗವದ್ಗೀತೆಯನ್ನು ಆರಾಧಿಸಿದರೆ ಒಳ್ಳೆಯ ಫಲಗಳು ಲಭಿಸುತ್ತವೆ ಎಂದರು.
ಶಾರದಾಂಬಾ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಭಗವದ್ಗಿತಾ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಭಗವದ್ಗೀಯೆಯ ಪಠಣದಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಅಭಿಯಾನ ಎಲ್ಲೆಡೆ ವ್ಯಾಪಿಸಲಿ ಎಂದರು. ಅಭಿಯಾನ ಸಮೀತಿಯ ಪ್ರಮುಖರಾದ ಡಾ.ಶಂಕರ ಭಟ್ಟ ಬಾಲಿಗದ್ದೆ ಅಭಿಯಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಅಭಿಯಾನ ಸಮೀತಿಯ ತಾಲೂಕಾ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಭಗವದ್ಗೀತೆಯು ಎಲ್ಲರ ಮನ, ಮನೆ ತಲುಪುವಂತಾಗಬೇಕು ಎನ್ನುವುದು ಸ್ವರ್ಣವಲ್ಲೀ ಶ್ರೀಗಳ ಆಶಯವಾಗಿದ್ದು, ಅಭಿಯಾನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದುಷಿ ರಾಧಾ ದೇಸಾಯಿ, ನಾಗರತ್ನಾ ಭಟ್ಟ ಕೋಣೆಮನೆ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಶಿಕ್ಷಣ ಇಲಾಖೆಯ ಪ್ರಶಾಂತ ಮುಂತಾದವರು ಪಾಲ್ಗೊಂಡಿದ್ದರು. ಸೀತಾ ಭಟ್ಟ ಮತ್ತು ಭಾರತಿ ಭಟ್ಟ ಪ್ರಾರ್ಥಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಜಿಲ್ಲಾ ಸಂಚಾಲಕ ಕೆ.ಜಿ.ಬೋಡೆ ವಂದಿಸಿದರು. ವಿದುಷಿ ರಾಧಾ ದೇಸಾಯಿ ಹಾಗೂ ನಾಗರತ್ನಾ ಭಟ್ಟ ಪ್ರಶಿಕ್ಷಣ ನೀಡಿದರು.
ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಮಾತೆಯರು ಹಾಗೂ ಭಗವದ್ಗೀತಾ ಅಭಿಯಾನ ಸಮೀತಿಯ ಪದಾಧಿಕಾರಿಗಳು, ಶ್ರೀಮಠದ ಭಕ್ತರು, ವಿವಿಧ ಅಂಗ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.