













10-10-2025 ಶುಕ್ರವಾರ ಯಲ್ಲಾಪುರ
ಭತ್ತದ ಬೆಳೆಗೆ ರೋಗ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ

ಯಲ್ಲಾಪುರ ತಾಲೂಕಿನಲ್ಲಿ ಮುಂಗಾರು ಹಂಗಾಮುಮುಕ್ತಾಯವಾಗಿದ್ದು, ಮಳೆಯ ಪ್ರಮಾಣಕ ಡಿಮೆಯಾಗಿದೆ. ಭತ್ತದ ಬೆಳೆಯು ಬಹುತೇಕ ಗರ್ಭಾಂಕುರ ಹಂತದಲ್ಲಿದ್ದು, ತಾಲೂಕಿನ ಮಂಚಿಕೇರಿ ಹೋಬಳಿಯ ಕೆರೆಹೊಸಳ್ಳಿ, ಬಿದ್ರಳ್ಳಿ, ಉಮ್ಮಚಗಿ, ತೋಳಗೋಡ, ಹೆಮ್ಮಾಡಿ, ಭರಣಿ ಹಾಗೂ ಭರತನಹಳ್ಳಿ ಗ್ರಾಮಗಳಲ್ಲಿ ಅಲ್ಲಲ್ಲಿ ಕಂದುಜಿಗಿ ಹುಳು, ಎಲೆಸುರುಳಿ ಹುಳುಗಳ ಬಾಧೆ ಹಾಗೂ ಬೆಂಕಿರೋಗದ ಬಾಧೆ ಕಂಡುಬಂದಿರುತ್ತದೆ.

ಕೃಷಿ ಇಲಾಖೆ ಸಿಬ್ಬಂದಿಗಳು, ಕೃಷಿ ವಿಜ್ಞಾನಕೇಂದ್ರ ಶಿರಸಿಯ ವಿಜ್ಞಾನಿಗಳೊಂದಿಗೆ ಭಾದಿತ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ರೈತರಿಗೆ ಈ ಕೆಳಗಿನ ಸಸ್ಯ ಸಂರಕ್ಷಣಾ ಕ್ರಮಗಳನ್ನು ಶಿಫಾರಸ್ಸು ಮಾಡಿದರು.

ಕಂದುಜಿಗಿ ಹುಳು :- ಈ ಕೀಟವು ಬೆಣೆ ಆಕಾರದಲ್ಲಿದ್ದು ಪ್ರೌಢ ಮತ್ತು ಅಪ್ಸರೆ ಕೀಟಗಳು ಕಾಂಡವನ್ನು ನೀರಿನ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆವರಿಸಿ ರಸ ಹೀರುತ್ತವೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆತಿರುಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ ಹಾಗೂ ಎಲೆಗಳು ಸುಟ್ಟಂತೆಕಾಣುತ್ತವೆ. ಈ ಕೀಟದ ಭಾದೆಯುತೆನೆ ಬರುವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭತ್ತದ ಹೊಲಗಳು ಕೆಂಪಾಗಿ ಕಾಣುವುದರಿಂದ ರೈತರು ಇದನ್ನು ಕೆಂಪುಕೊಳೆ ಎಂದು ತಪ್ಪಾಗಿ ಗ್ರಹಿಸಿ ಶಿಫಾರಸ್ಸು ಇಲ್ಲದ ಔಷಧಗಳನ್ನು ಸಿಂಪಡಿಸುವುದರಿಂದ ಕೀಟ ಹತೋಟಿ ಬರುವುದಿಲ್ಲ.

ನಿರ್ವಹಣಾ ಕ್ರಮಗಳು:- ಭಾದಿತ ಹೊಲಗಳಿಗೆ ಸಾರಜನಕಗೊಬ್ಬರವನ್ನು ನೀಡಬಾರದು, ಗದ್ದೆಯಲ್ಲಿ ನೀರನ್ನುಕಡಿಮೆ ಮಾಡಬೇಕು, ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್0.3 ಮಿಲಿ ಪ್ರತೀ ಲೀಟರ್ ನೀರಿಗೆ ಅಥವಾ ಥಯೋಮೆಥಾಕ್ಸಾಮ್ 0.5 ಗ್ರಾಂ ಪ್ರತೀ ಲೀಟರ್ ನೀರಿಗೆಅಥವಾಬುಪ್ರೋಪಿಜಿನ್ 1.5 ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಎಕರೆಗೆ 200 ಲೀ ಸಿಂಪರಣಾ ದ್ರಾವಣವನ್ನು ತಯಾರಿಸಿ ಭತ್ತದ ಸಸಿಗಳು ಸಂಪೂರ್ಣಒದ್ದೆಯಾಗುವಂತೆ ಸಿಂಪಡಿಸಬೇಕು.
ಎಲೆಸುರುಳಿ ಕೀಟ :- ಈ ಕೀಟವು ನಾಟಿ ಮಾಡಿ 15 ದಿನಗಳಿಂದ ತೆನೆ ಬರೊವವರೆಗೂ ಭಾದಿಸುತ್ತಿದ್ದು,ಮರಿಹುಳು ಎಲೆಯನ್ನು ಸುರುಳಿ ಮಾಡಿ ಅದರ ಒಳಗಡೆಯಿಂದ ಹಸಿರು ಭಾಗವನ್ನುಕೆರೆದುತಿನ್ನುವುದರಿಂದಕೀಟದ ಭಾದೆ ಹೆಚ್ಚಾದಾಗಪೈರು ಸುಟ್ಟಂತೆಕಾಣುತ್ತದೆ. ಈ ಕೀಟದ ಹತೋಟಿಗಾಗಿ ಕೀಟನಾಶಕಗಳಾದ ಪ್ರೊಫೆನೊಫಾಸ್ 50 ec 2 ಮಿಲಿ ಅಥವಾಕ್ಲೋರೋಪೈರಿಪಾಸ್20 ec 2 ಮಿಲಿ ಅಥವಾ ಕ್ವಿನಾಲ್‍ಫಾಸ್25 ec 2 ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಎಕರೆಗೆ 200 ಲೀ ಸಿಂಪರಣಾ ದ್ರಾವಣವನ್ನು ತಯಾರಿಸಿ ಸಿಂಪಡಿಸಬೇಕು. ಸಿಂಪಡಿಸುವ ಪೂರ್ವದಲ್ಲಿ ಮುಳ್ಳಿನ ಕಂಟಿಯಿಂದ ಗದ್ದೆಯ ಮೇಲೆ ಹಾಯಿಸಬೇಕು.
ಕಾಂಡಕೊರೆಯುವ ಹುಳು :- ಈ ಕೀಟವು ಭತ್ತದಕೊನೆಯ ಹಂತದಲ್ಲಿ ಕಾಣಿಸಿಕೊಂಡು ಕಾಂಡವನ್ನುಕೊರೆದುತಿಂದುಸುಳಿಯು ಬಾಡಿಹೋಗುವಂತೆ ಮಾಡುತ್ತದೆ. ಇದರಿಂದ ಭತ್ತದ ತೆನೆಗಳು ಜೊಳ್ಳಾಗಿ ಇಳುವರಿ ಕುಂಠಿತವಾಗುತ್ತದೆ. ಈ ಹುಳುವಿನ ಹತೋಟಿಗಾಗಿ ಈ ಮೇಲೆ ತಿಳಿಸಿದ ಕ್ಲೋರೋಪೈರಿಪಾಸ್, ಪ್ರೊಫೆನೊಫಾಸ್ ಹಾಗೂ ಕ್ವಿನಾಲ್‍ಫಾಸ್ ಇವುಗಳಲ್ಲಿ ಯಾವುದಾದರೂಒಂದನ್ನು 2 ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಬೆಂಕಿ ರೋಗ:- ಈ ರೋಗವು ಶೀಲೀಂದ್ರದಿಂದ ಬರುತ್ತಿದ್ದು, ಮಳೆ ಕಡಿಮೆಯಾಗಿ ಇಬ್ಬನಿ ಹೆಚ್ಚಾದಾಗ ಕಾಣಿಸಿಕೊಳ್ಳುತ್ತದೆ. ಈ ರೋಗ ಭಾದಿತ ಎಲೆಗಳಲ್ಲಿ ಕಣ್ಣಿನಾಕಾರದಕಂದು ಚುಕ್ಕೆಗಳಾಗಿ ಕ್ರಮೇಣಸುಟ್ಟಂತೆಕಾಣುತ್ತದೆ. ರೋಗದ ಹತೋಟಿಗಾಗಿಟ್ರೈಸೈಕ್ಲೋಝೋಲ್ (ಭೀಮ್) 0.6 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ತೆನೆತಿಗಣೆ:- ಈ ಕೀಟವುಭತ್ತವು ಹಾಲುಗಾಳು ಹಂತದಲ್ಲಿರುವಾಗ ಕಾಣಿಸಿಕೊಳ್ಳುತ್ತದೆ. ಕೀಟವುತೆನೆಯ ಮೇಲೆ ಕುಳಿತು ಕಾಳುಗಳಲ್ಲಿನ ಹಾಲನ್ನು ಹೀರಿತೆನೆಯನ್ನು ಜೊಳ್ಳಾಗಿಸುತ್ತದೆ. ಕೀಟವನ್ನುಕೈಯಿಂದ ಮುಟ್ಟಿದಾಗಕೆಟ್ಟ ವಾಸನೆ ಬರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಭಾದಿಸಿದಾಗ ಇಳುವರಿ ತೀವೃಕುಂಠಿತವಾಗುತ್ತದೆ. ಈ ಕೀಟದ ಹತೋಟಿಗಾಗಿ ಮೆಲಾಥಿಯಾನ್20ಇಅ 2 ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳಗಿನ ಜಾವದಲ್ಲಿ ಸಿಂಪಡಿಸಬೇಕು.
ಈ ಮೇಲಿನ ಯಾವುದೇ ಕೀಟ ರೋಗಗಳು ಭಾದಿಸಿದ್ದಲ್ಲಿ ರೈತರು ಸಿಂಪರಣೆ ಮಾಡುವ ಪೂರ್ವದಲ್ಲಿ ಸಮೀಪದರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಿಬ್ಬಂದಿಗಳನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















