ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ದಿನೇಶ ಗುಂಡೂರಾವ್
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಹೇಳಿದರು.
ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ 9 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ನೂತನ ಸಮುದಾಯದ ಆರೋಗ್ಯ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಸಿಬ್ಬಂದಿಗಳ ಮರು ಹೊಂದಾಣಿಕೆ ಮೂಲಕ ಎಲ್ಲಾ ಸರ್ಕಾರಿ ಅಸ್ಪತ್ರೆಗಳಲ್ಲಿ ಕೊರತೆ ಇರುವ ಸಿಬ್ಬಂದಿಗಳನ್ನು ಭರ್ತಿ ಮಾಡಲಾಗುವುದು, 24 ಗಂಟೆ ಲಭ್ಯ ಇರುವಂತೆ ರಾಜ್ಯದ ಎಲ್ಲಾ ತಾಲೂಕಾ ಆಸ್ಪತ್ರೆಗಳಲ್ಲಿ 2 ಸ್ರ್ತೀರೋಗ ತಜ್ಞರು, 2 ಮಕ್ಕಳ ತಜ್ಞರು,2 ರೇಡಿಯೋಲಾಜಿಸ್ಟ್, 2 ಅನಸ್ತೇಷಿಯಾ ತಜ್ಞರನ್ನು ಎರಡು ತಿಂಗಳಲ್ಲಿ ನೇಮಿಸಲಾಗುವುದು ಎಂದರು.
ಸರ್ಕಾರ ಎಲ್ಲಾ ಇಲಾಖೆಯಿಂದ ಅಭಿವೃದ್ಧಿ ಆಗುತ್ತಿದೆ. ಆದರೂ ವಿರೋಧ ಪಕ್ಷದವರು ವಿನಾಕಾರಣ ಟೀಕಿಸುತ್ತಿದ್ದಾರೆ, ಯಾವುದೇ ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ ಎಂದ ಅವರು, ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಮಾಡಲಾಗುವುದು, ನೂತನವಾಗಿ ಆರಂಭಗೊಂಡ ಈ ಆಸ್ಪತ್ರೆಗೆ ಅಗತ್ಯ ಇರುವ ಸಿಬ್ಬಂದಿಗಳನ್ನು ಹಾಗೂ ಉಪಕರಣ ಒದಗಿಸಲಾಗುವದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಕಿರವತ್ತಿಯಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಆಗಬೇಕೆನ್ನುವುದು ಬಹಳ ವರ್ಷದ ಕನಸಾಗಿತ್ತು, ಈ ಕನಸು ಇಂದು ನನಸಾಗುತ್ತಿದೆ. ಬಡವರ ಆರೋಗ್ಯ ರಕ್ಷಣೆಯ ಕೆಲಸವನ್ನು ಸರ್ಕಾರ ಮಾಡಿದೆ. ರಾಜ್ಯ ಸರ್ಕಾರದ ನೆರವಿನಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದ ಅವರು, ನೂತನ ಆಸ್ಪತ್ರೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುವಂತಾಗಬೇಕು ಎಂದರು.
ಹೆಬ್ಬಾರರನ್ನು ಹೊಗಳಿದ ಸಚಿವ
ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸಚಿವ ದಿನೇಶ ಗುಂಡೂರಾವ್ ಅವರು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಕಾರ್ಯವೈಖರಿಯನ್ನು ಹಾಗೂ ಹೆಬ್ಬಾರ್ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿಶೇಷವಾಗಿ ಹೊಗಳಿದರು. ಸಚಿವರಾಗಿ, ಶಾಸಕರಾಗಿ ಹೆಬ್ಬಾರ್ ಅವರು ಮಾದರಿ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ, ತಹಶಿಲ್ದಾರ ಚಂದ್ರಶೇಖರ್, ಹೊಸಮನಿ, ವಿಭಾಗೀಯ ಸಹನಿರ್ದೇಶಕಿ ಡಾ.ಪುಷ್ಪಾ, ತಾ.ಒಂ.ಇಒ.ರಾಜೇಶ ಧನವಾಡಕರ್ ಪ್ರಮುಖರಾದ ಸಂಗೀತ ಕೊಕ್ರೆ, ವಿಜಯ ಮಿರಾಶಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಸ್ವಾಗತಿಸಿದರು. ಶಿಕ್ಷಕ ಸುಧಾಕರ ನಾಯಕ ನಿರ್ವಹಿಸಿದರು. ಡಾ.ನರೇಂದ್ರ ಪವಾರ್ ವಂದಿಸಿದರು.