ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರಿಗೋಪಾಲಕೃಷ್ಣ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಶ್ರೀಮದ್ಭಾಗವತ ಸಪ್ತಾಹದ ಮಂಗಲೋತ್ಸವ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಸಪ್ತಾಹದ ಸಂದರ್ಭದಲ್ಲಿ ಪ್ರತಿ ದಿನ ಶ್ರೀಮದ್ಭಾಗವತದ ಕುರಿತು ಪ್ರವಚನ ನೀಡಿದ ವಿದ್ವಾನ್ ವಾಸುದೇವ ಭಟ್ಟ ಹಂದಲಸು ಅವರನ್ನು ಮಂಗಲ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ವಿದ್ವಾನ್ ವಾಸುದೇವ ಭಟ್ಟರು ಮಾತನಾಡಿ, ಪ್ರತಿಯೊಬ್ಬರ ಹೃದಯದಲ್ಲಿಯೂ ಭಗವಂತನು ನೆಲೆಸಿದ್ದಾನೆ. ಭಗವಂತನ ಅನುಗ್ರಹದಿಂದ ಮನುಷ್ಯರಾಗಿ ಜನ್ಮಪಡೆದ ನಾವೆಲ್ಲರೂ ಭಗವಂತನು ಮೆಚ್ಚುವಂತೆ ಸಾರ್ಥಕ ಜೀವನವನ್ನು ನಡೆಸಬೇಕು. ಭಗವಂತನ ಸ್ಮರಣೆ, ಚಿಂತನೆ, ಪೂಜೆ, ಅನುಷ್ಠಾನ, ಜಪ,ತಪ, ಸದಾಚಾರ ಸಂಪನ್ನತೆಯಿಂದ ಜೀವಿಸಬೇಕು ಎಂದರು.

ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ವಿ.ವಾಸುದೇವ ಭಟ್ಟ ಅವರನ್ನು ನಾರಾಯಣ ಭಟ್ಟ ಬಿದ್ರೆಪಾಲ್, ಸುಹಾಸ ಭಾಗ್ವತ್, ಮಹಾಬಲೇಶ್ವರ ಭಾಗ್ವತ್, ಗೋಪಾಲಕೃಷ್ಣ ಭಟ್ಟ ಮುಂತಾದವರು ಸನ್ಮಾನಿಸಿ ಗೌರವಿಸಿದರು. ದೇವಾಲಯದ ಪುರೋಹಿತರಾದ ಡಾ.ಶಂಕರ ಭಟ್ಟ ಬಾಲಿಗದ್ದೆ ನಿರ್ವಹಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ಸನ್ಮಾನಪತ್ರ ವಾಚಿಸಿದರು.

ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಸನ್ಮಾನಪತ್ರವನ್ನು ವಿ. ವಾಸುದೇವ ಭಟ್ಟರಿಗೆ ಸಮರ್ಪಿಸಿದರು.

ಅನೇಕ ಶತಮಾನಗಳ ಇತಿಹಾಸ ಹೊಂದಿರುವ, ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಪುಣ್ಯಕ್ಷೇತ್ರವಾದ ಅಣಲಗಾರಿನಲ್ಲಿ ಇದೇ ಮೊದಲಬಾರಿಗೆ ನಡೆದ ಶ್ರೀಮದ್ಭಾಗವತ ಸಪ್ತಾಹವು ಎಲ್ಲರ ಸಹಾಯ, ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಮತ್ತು ಮಾದರಿಯಾಗಿ ನಡೆಯಿತು.

ಮುಕ್ತಾಯದ ದಿನವಾದ ಶುಕ್ರವಾರ ಸಂಜೆ ಸ್ವರ್ಣವಲ್ಲೀ ಉಭಯ ಶ್ರೀಗಳು ದೇವಾಲಯಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವದಿಸಿದ್ದು ಪುಣ್ಯಕ್ಷಣವಾಗಿದೆ. ಸ್ವರ್ಣವಲ್ಲಿ ಕಿರಿಯ ಶ್ರೀಗಳು ಪ್ರಥಮ ಬಾರಿಗೆ ದೇವಾಲಯಕ್ಕೆ ಆಗಮಿಸಿರುವುದು ವಿಶೇಷವಾಗಿದೆ. ಸಪ್ತಾಹದ ಯಶಸ್ಸಿಗೆ ಊರಿನ ಮತ್ತು ಹೊರ ಊರಿನ ಅಸಂಖ್ಯಾತ ಭಕ್ತರು ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ.

ಶ್ರೀಮದ್ಭಾಗವತ ಸಪ್ತಾಹದ ನಿಮಿತ್ತ ದೇವಾಲಯದಲ್ಲಿ ಪ್ರತಿದಿನ ಶ್ರೀಮದ್ಭಾಗವತ ಮೂಲಗ್ರಂಥದ ಪಾರಾಯಣ, ವೇದಪಾರಾಯಣ, ವಾಸುದೇವ ಮಂತ್ರ ಜಪ, ಗೋಪಾಲಕೃಷ್ಣ ದೇವರಿಗೆ 1008 ಪುರುಷಸೂಕ್ತಪೂರ್ವಕ ಕ್ಷೀರಾಭಿಷೇಕ ಮುಂತಾದ ಧಾರ್ಮಿಕ ವಿನಿಯೋಗಗಳು ಸಾಂಗವಾಗಿ ನಡೆದವು.

ಮಾತೆಯರಿಂದ ಸಂಪೂರ್ಣ ಭಗವದ್ಗೀತಾ ಪಠಣ, ಭಜನೆ ನಡೆದವು. ಏಳು ದಿನ ಪ್ರತಿನಿತ್ಯ ದೇವಾಲಯಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಂಗಲ ಸಮಾರಂಭದ ದಿನ ಪುರುಷ ಸೂಕ್ತಹವನ, ವಾಸುದೇವ ಹವನ, ವೈದಿಕ ಮಂತ್ರಾಕ್ಷತೆ, ಆಶೀರ್ವಚನ ನಡೆದವು.

ಶ್ರೀಮದ್ಭಾಗವತ ಸಪ್ತಾಹದ ಸಂದರ್ಭದಲ್ಲಿ ಪ್ರತಿದಿನ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಈ ಮಹೋನ್ನತವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾದವರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading