ಸಾಹಿತ್ಯಗಳನ್ನು ಓದುವುದರಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಮನಸ್ಸನ್ನು ಮುದಗೊಳಿಸಿ, ಶುದ್ಧ ಅಂತಃಕರಣದೊಂದಿಗೆ ಪರಿಪೂರ್ಣವಾದ ವ್ಯಕ್ತಿತ್ವ ವಿಕಸಿಸುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಡಿ.ಜನಾರ್ಧನ ಹೇಳಿದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆದ ಕನ್ನಡ ಕಾರ್ತಿಕ ಅನುದಿನ-ಅನುಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯವು ಓದುಗರಿಗೆ ತಲುಪುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೊಡದೇ ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡುವ ಕೆಲಸ ಎಲ್ಲರಿಂದ ಆಗಬೇಕು ಎಂದರು.

ಯಕ್ಷಗಾನ ಪ್ರಸಂಗಗಳು ಹಾಗೂ ಕನ್ನಡ ಸಾಹಿತ್ಯ ಎಂಬ ವಿಷಯದ ಕುರಿತು ತಾಳಮದ್ದಳೆ ಅರ್ಥಧಾರಿ ಎಂ.ಎನ್.ಹೆಗಡೆ ಉಪನ್ಯಾಸ ನೀಡಿ, ಶುದ್ಧ ಕನ್ನಡ ಭಾಷೆಯನ್ನು ಬಳಸುತ್ತಿರುವುದು ಯಕ್ಷಗಾನದಲ್ಲಿ ಮಾತ್ರ. ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆಯೂ ಇದೆ. ಸಾವಿರಾರು ಯಕ್ಷಗಾನ ಪ್ರಸಂಗದ ಕೃತಿಗಳು ಕನ್ನಡ ಭಾಷೆಯಲ್ಲಿ ರಚಿತವಾಗಿವೆ ಎಂದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ ತಟ್ಟಿಗದ್ದೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಕರ್ತ ಕೆ.ಎಸ್.ಭಟ್ಟ, ತಾ.ಸ.ನೌ.ಸಂಘದ ಅಧ್ಯಕ್ಷ ಸಂಜೀವ ಹೊಸಕೇರಿ ಪಾಲ್ಗೊಂಡಿದ್ದರು. ತಾಲೂಕಾ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಸಕೀನಾ ಶೇಖ್ ನಿರ್ವಹಿಸಿದರು. ಭೂಮಿಕಾ ರಾಯ್ಕರ್ ವಂದಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading