ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಐವರಿಗೆ ಗಾಯವಾದ ಘಟನೆ ಯಲ್ಲಾಪುರ ಪಟ್ಟಣದ ಹೊರವಲಯದ ಮಲ್ಲಿಕಾ ಹೊಟೇಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಆರೋಪಿ ಕಾರು ಚಾಲಕ ಬೆಳಗಾವಿ ಜಿಲ್ಲೆಯ ಮೂಡಲಗಿಯ ಸಂತೋಷ ಕಾಶಪ್ಪ ಕಲಾಲ್ ಎಂಬಾತ ತನ್ನ ಕಾರನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದು ಮಲ್ಲಿಕಾ ಹೊಟೇಲ್ ಸಮೀಪ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಯಲ್ಲಾಪುರದ ಮಾರುತಿ ಮಹಾದೇವ ಬೋವಿವಡ್ಡರ್ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ ಮಾರುತಿ ಬೋವಿವಡ್ಡರ್ ಅವರ ಬಲಭುಜಕ್ಕೆ ಒಳನೋವಾಗಿದೆ.
ಈ ಕಾರಿನಲ್ಲಿದ್ದ ಸುರೇಶ ಅವರಿಗೆ ಹಣೆ, ಮೂಗು, ಬಾಯಿಗೆ ಗಾಯವಾಗಿದ್ದು, ತೋಳರಾಮಜೀ ಅವರಿಗೆ ಬಲಭುಜಕ್ಕೆ ಒಳಪೆಟ್ಟಾಗಿದೆ. ಇನ್ನೊಂದು ಕಾರಿನಲ್ಲಿದ್ದ ಶಿವಾನಂದ ಎಂಬಾತನಿಗೆ ಬಾಯಿ ಮತ್ತು ಮೂಗಿಗೆ ಗಾಯವಾಗಿದೆ. ಕಾರು ಚಾಲಕ ಸಂತೋಷ ಕಲಾಲ್ ಗೆ ಬಲಕೈ ಮೊಣಗಂಟಿನ ಕೆಳಗೆ ಹಾಗೂ ಬಲಕಾಲು ಮೊಳಗಂಟಿನ ಕೆಳಗೆ ಗಾಯವಾಗಿದೆ. ಘಟನೆಯಲ್ಲಿ ಎರಡೂ ಕಾರುಗಳು ಜಕಂಗೊಂಡಿದ್ದು, ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಕಾಂಕರ್ ಗೆ ಖಾಸಗಿ ಬಸ್ ಡಿಕ್ಕಿ : 12 ಜನರಿಗೆ ಗಾಯ
ಖಾಸಗಿ ಬಸ್ಸೊಂದು ಟ್ಯಾಂಕರ್ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12 ಪ್ರಯಾಣಿಕರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲುಕಿನ ಗುಳ್ಳಾಪುರದಲ್ಲಿ ಶುಕ್ರವಾರ ನಡೆದಿದೆ.
ಆರೋಪಿ, ಚಾಲುಕ್ಯ ಬಸ್ ಚಾಲಕ ಭಟ್ಕಳದ ಗಣಪತಿ ವೆಂಕಟ್ರಮಣ ಶೆಟ್ಟಿ ಎಂಬಾತನು ಚಾಲುಕ್ಯ ಬಸ್ಸನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದು, ಗುಳ್ಳಾಪುರದ ಕೆಇಬಿ ಗ್ರಿಡ್ ಹತ್ತಿರ ಯಲ್ಲಾಪುರ ಕಡೆಗೆ ಬರುತ್ತಿದ್ದ ಟ್ಯಾಂಕರ್ ಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಈ ಘಟನೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12 ಜನರಿಗೆ ಗಾಯವಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.