ಕಾಂಗ್ರೆಸ್ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ
ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ಶಾಸಕರಿಗೇ ಸಂಪೂರ್ಣವಾದ ವಿಶ್ವಾಸ ಇಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ರವಿವಾರ ಯಲ್ಲಾಪುರ ಪಟ್ಟಣಕ್ಕೆ ಭೇಟಿನೀಡಿದ ಅವರು, ಖಾಸಗಿ ಹೊಟೇಲೊಂದರಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಅಮಾಯಕರ ಹತ್ಯೆ ಮುಂತಾದ ಅಹಿತಕರ ಘಟನೆಗಳು ನಡೆಯುತ್ತಿವೆ, ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕೀಯ, ಅಲ್ಪ ಸಂಖ್ಯಾತರ ಓಲೈಕೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.
ದೇಶದ್ರೋಹಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ. ಅನೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ನಡೆಸುವ ಮುನ್ನವೇ ರಾಜ್ಯ ಸಕಾರ ಆರೋಪಿಗಳಿಗೆ ಕ್ಲೀನ್ ಚೀಟ್ ನೀಡುತ್ತಿರುವುದನ್ನು ಕಾಣುತ್ತೇವೆ, ಕಾನೂನು, ಪೊಲೀಸ್ ಇಲಾಖೆಯ ಬಗ್ಗೆ ಸಮಾಜ ಘಾತುಕರಿಗೆ ಭಯ ಇಲ್ಲದಂತಾಗಿದೆ, ಕೆಲವರಿಗೆ ನಾವು ಏನು ಮಾಡಿದರೂ ಸರ್ಕಾರದಿಂದ ನಮಗೆ ರಕ್ಷಣೆ ಸಿಗುತ್ತದೆ ಎಂಬ ಮನೋಭಾವನೆ ಇದೆ. ಇಂತಹ ಘಟನೆಗಳಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಎದ್ದುಕಾಣುತ್ತಿದೆ.
ದಾರಿ ತಪ್ಪಿದ ಯುವಕರಿಂದ ಅಪರಾಧ ಕೃತ್ಯಗಳು ಪುನರಾವರ್ತನೆಯಾಗುತ್ತಿವೆ, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಜಿಲ್ಲಾವಾರು ಸಭೆ ನಡೆಸುತ್ತೇನೆ
ಪಕ್ಷದ ಸಂಘಟನೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕಾರ್ಯಕರ್ತರ, ಮುಖಂಡರ ಸಭೆ ನಡೆಸುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.
ನಮ್ಮ ತಪ್ಪಿನಿಂದ ಕಾಂಗ್ರೆಸ್ ಗೆ ಅಧಿಕಾರ
ಹಿಂದಿನ ವಿಧಾನ ಸಭೆಯ ಚುನಾವಣೆ ಸಂದರ್ಭದಲ್ಲಿ ನಮ್ಮ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವಂತಾಯಿತು ಎಂದ ವಿಜಯೇಂದ್ರ, ನಮ್ಮೊಳಗಿನ ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.