ರಂಜಿತಾ ಬನ್ಸೋಡೆ ಕುಟುಂಬಕ್ಕೆ ಸಾಂತ್ವನ ಹೇಳಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮೀತಿಯ ರಾಜ್ಯ ಪ್ರಮುಖರು
ಇತ್ತೀಚೆಗೆ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಮುಸ್ಲಿಂ ಯುವಕನಿಂದ ಹತ್ಯೆಯಾದ ರಂಜಿತಾ ಬನ್ಸೋಡೆ ಮನೆಗೆ ಕರ್ನಾಟಕ ವಿಧಾನ ಮಂಡಳದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮೀತಿಯ ಅಧ್ಯಕ್ಷ, ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಸಮೀತಿಯ ಸದಸ್ಯ , ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ಹಾಗೂ ಹಿರಿಯ ಅಧಿಕಾರಿಗಳ ತಂಡದವರು ಶುಕ್ರವಾರ ಸಂಜೆ ಭೇಟಿ ನೀಡಿದರು.
ಮೃತ ರಂಜಿತಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಇದೊಂದು ಅಮಾನವೀಯ ಘಟನೆಯಾಗಿದೆ. ಮೃತ ರಂಜಿತಾ ಅವರ ಪುತ್ರನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಮತ್ತು ಆತನ ಮುಂದಿನ ಜೀವನ ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಸಮೀತಿಯ ಪ್ರಮುಖರು ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್ಪಿ ಎಂ.ದೀಪನ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.
ಶಾಲೆ,ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ
ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಶುಕ್ರವಾರ ಯಲ್ಲಾಪುರ ಪಟ್ಟಣದ ವಿವಿಧ ಶಾಲೆ, ಅಂಗನವಾಡಿಗಳಿಗೆ ದಿಢೀರ್ ಭೇಟಿನೀಡಿದರು.
ಪಟ್ಟಣದ ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿಸಿ ಊಟ ತಯಾರಿ ಕೋಠಡಿ ಹಾಗೂ ಅಡುಗೆ ಸಾಮಗ್ರಿಗಳನ್ನು ಪರಿಶೀಲಿಸಿದರು.
ಬಿಸಿಎಂ ಹಾಸ್ಟೇಲ್ ಹಾಗೂ ಗಣಪತಿಗಲ್ಲಿ ಅಂಗನವಾಡಿ ಕೇಂದ್ರಕ್ಕೂ ಅವರು ಭೇಟಿನೀಡಿದರು. ಜಿ.ಪಂ. ಇಒ ದಿಲೀಷ್ ಶಶಿ, ತಹಶೀಲ್ದಾರ್ ಚಂದ್ರಶೇಖರ ಹೊಸಮನಿ, ತಾ.ಪಂ. ಇಒ ರಾಜೇಶ ಧನ್ವಾಡಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.