ಹವ್ಯಕರ ಸಂಖ್ಯೆ, ಸಂಘಟನೆ, ಸಂಸ್ಕಾರ ಕ್ಷೀಣವಾಗಲು ಬಿಡಬಾರದು ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ನುಡಿದರು.

ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಗುರುವಾರ ಹವ್ಯಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿ, ಕುಟುಂಬದ ಮಕ್ಕಳಿಗೆ ಸೂಕ್ತ ವಯಸ್ಸಿಗೆ ವಿವಾಹ ಮಾಡಬೇಕು, ಕನಿಷ್ಠ ಮೂರು ಮಕ್ಕಳನ್ನು ಹೆರುವಂತಾಗಬೇಕು,

ಹವ್ಯಕರು ಹವ್ಯಕರಾಗಿಯೇ ಉಳಿಯಲು ಸಮಾಜದಲ್ಲಿ ಸಂಘಟನೆ ಬಹಳ ಅವಶ್ಯವಾಗಿದೆ, ಅನಗತ್ಯ ಮತ್ತು ಅತೀಯಾದ ಟೀಕೆ ಮಾಡಿದರೆ ಇದು ವಿಘಟನೆಗೆ ಕಾರಣವಾಗುತ್ತದೆ, ಹೀಗಾಗಬಾರದು ಎಂದರು.

ಎಲ್ಲರೀತಿಯ ವ್ಯವಸ್ಥೆ ಇದ್ದೂ ಸಂಸ್ಕಾರ ಇಲ್ಲದಿದ್ದರೆ ವ್ಯರ್ಥ, ನಮ್ಮ ಪರಂಪರೆ, ನಿತ್ಯಾನುಷ್ಠಾನದೊಂದಿಗೆ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು. ಕೃಷಿಕರು ಯಾವುದೇ ಕಾರಣಕ್ಕೂ ಕೃಷಿ ಜಮೀನುಗಳನ್ನು ಮಾರಾಟ ಮಾಡಬಾರದು, ಹಳ್ಳಿಗಳು ನಮ್ಮ ಸಂಸ್ಕಾರದ ನೆಲೆಗಳಾಗಿದ್ದು, ನಮಗೆ ಪೂರಕವಾದ ವಾತಾವರಣ ಇರುವ ಇಂತಹ ನೆಲೆಗಳನ್ನು ಕಳೆದುಕೊಳ್ಳಬಾರದು, ಆಧುನಿಕತೆಯ ಭರಾಟೆಯಲ್ಲಿ ವಿದೇಶಿ ವ್ಯಾಮೋಹದ ವಿಕಾರ ಸರಿಯಲ್ಲ ಎಂದರು.

ಆದಷ್ಟು ಬೇಗ ಈ ಜಾಗದಲ್ಲಿ ಭವ್ಯವಾದ ಹವ್ಯಕ ಭವನ ನಿರ್ಮಾಣವಾಗಲಿ, ಮುಂದಿನ ದಿನಗಳಲ್ಲಿ ಈ ಹವ್ಯಕ ಭವನದಲ್ಲಿ ಶಾಸ್ತ್ರೀಯ ವಿವಾಹ, ಉಪನಯನ ಮುಂತಾದ ಉಪಯುಕ್ತ ಕಾರ್ಯಚಟುವಟಿಕೆಗಳು ನಡೆದು ಸಮಾಜದ ಎಲ್ಲರಿಗೂ ಅನುಕೂಲವಾಗಲಿ ಎಂದರು.

ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಹವ್ಯಕ ಸಮುದಾಯದ ಅನೇಕ ಮಹನೀಯರ ಪ್ರಯತ್ನದಿಂದ ಸಮಾಜಕ್ಕೆ ಈ ನಿವೇಶನ ಲಭಿಸಿದೆ, ಇಲ್ಲಿ 9 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹವ್ಯಕ ಭವನಕ್ಕೆ ಸರ್ಕಾರದಿಂದ 55 ಲಕ್ಷ ರೂ ಅನುದಾನ ಮಂಜೂರಿ ಮಾಡಿಸುತ್ತೇನೆ, ವಯಕ್ತಿಕವಾಗಿಯೂ ಎಲ್ಲ ರೀತಿಯಲ್ಲಿ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿದರು.

ವೇ.ನಾಗೇಂದ್ರ ಭಟ್ಟ ಹಿತ್ಲಳ್ಳಿ, ವೇ. ತಿಮ್ಮಣ್ಣ ಭಟ್ಟ ಬಾಲಿಗದ್ದೆ ಉಪಸ್ಥಿತರಿದ್ದರು. ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು, ಪಲ್ಲವಿ ಭಟ್ಟ ಪ್ರಾರ್ಥಿಸಿದರು, ಕಟ್ಟಡ ನಿರ್ಮಾಣ ಸಮೀತಿಯ ಅಧ್ಯಕ್ಷ ಮಾರುತಿ ಘಟ್ಟಿ ಸ್ವಾಗತಿಸಿದರು, ರವಿ ಭಟ್ಟ ಬರಗದ್ದೆ ನಿರ್ವಹಿಸಿದರು, ಸಮೀತಿಯ ಉಪಾಧ್ಯಕ್ಷ ನಾಗರಾಜ ಕವಡಿಕೆರೆ ವಂದಿಸಿದರು. ಎರಡು ಸಾವಿರದಷ್ಟು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹವ್ಯಕ ಭವನ ನಿರ್ಮಾಣದ ಶಿಲಾನ್ಯಾಸದ ಅಂಗವಾಗಿ ವೈದಿಕರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಗಣಹವನ, ಭೂವರಾಹ ಶಾಂತಿ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ರುದ್ರ ಹವನ, ಗಾಯತ್ರಿ ಹವನ, ದುರ್ಗಾ ಶಾಂತಿ, ನಾಗಮೂಲ ಮಂತ್ರ ಹವನ, ಗುರುಪಾದಪೂಜೆ ಮುಂತಾದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾತೆಯರಿಂದ ಭಗವದ್ಗೀತಾ ಪಠಣ ನಡೆಯಿತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading