ರೈತ ವಿರೋಧಿ ಧೊರಣೆ ಅನುಸರಿಸುತ್ತಿರುವ ಯಲ್ಲಾಪುರ ಪಟ್ಟಣದ ಟಿ.ಎಂ.ಎಸ್. ಸಂಸ್ಥೆಯ ಆಡಳಿತಾಧಿಕಾರಿಯನ್ನು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿ ಟಿ.ಎಂ.ಎಸ್.ಸಂಸ್ಥೆಯ ಎದುರು ಬುಧವಾರ ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆ, ಧರಣಿ ನಡೆಸಿದರು.

ಟಿ.ಎಂ.ಎಸ್. ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿ ಸಂಸ್ಥೆಯ ಆಡಳಿತಾಧಿಕಾರಿಯು ಅಧಿಕಾರ ನಡೆಸುತ್ತಿದ್ದು, ಇದರಿಂದ ಸಂಸ್ಥೆಯ ಸದಸ್ಯರಿಗೆ ಮತ್ತು ರೈತರಿಗೆ ತೊಂದರೆಯಾಗುತ್ತಿದೆ. ಸಂಸ್ಥೆಯ ಅಧಿಕಾರ ಹಿಡಿಯಲು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ. ಇದರಿಂದ ಸಂಸ್ಥೆ ಹಾಗೂ ಸದಸ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದ ಅವರು, ಆಡಳಿತಾಧಿಕಾರಿಯನ್ನು ಕೂಡಲೆ ವಜಾ ಮಾಡದಿದ್ದರೆ ಮತ್ತು ಅವರು ಕೈಗೊಂಡ ಸಂಸ್ಥೆಗೆ ಮಾರಕವಾಗುವ ಠರಾವನ್ನು ಹಿಂಪಡೆಯದಿದ್ದರೆ ಗುರುವಾರ ರಸ್ತೆ ತಡೆ ಹೋರಾಟ ಮತ್ತು ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಆಡಳಿತಾಧಿಕಾರಿಗೆ ದೈನಂದಿನ ವ್ಯವಹಾರ ನೋಡಿಕೊಳ್ಳುವ ಹೊಣೆ ಇದೆಯೇ ಹೊರತು ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಹಾಗೂ ಆಡಳಿತಾತ್ಮಕ ನೀತಿ ನಿರೂಪಣೆ ಮಾಡುವ ಅಧಿಕಾರ ಇಲ್ಲ. ಸಂಸ್ಥೆಯ ಉನ್ನತಿಯನ್ನು, ರೈತರ ಹಿತವನ್ನು ಬಯಸದ ಕೆಲವರು ನಿರಂತರವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಿಯಮಾವಳಿ ಉಲ್ಲಂಘಿಸುತ್ತಿರುವ ಆಡಳಿತಾಧಿಕಾರಿಯನ್ನು ವಜಾ ಮಾಡಬೇಕು ಎಂದರು. ರೈತರ ತಾಳ್ಮೆಯನ್ನು ಯಾರೂ ಪರೀಕ್ಷಿಸಬಾರದು. ಗುರುವಾರ ನಡೆಯುವ ರಸ್ತೆ ತಡೆ ಮತ್ತು ಶುಕ್ರವಾರ ನಡೆಯುವ ಉಪವಾಸ ಸತ್ಯಾಗ್ರಹವನ್ನು ನಾವೆಲ್ಲರೂ ಬೆಂಬಲಿಸುತ್ತೇವೆ. ಸಂಸ್ಥೆಯ ಉಳಿವಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದರು.

ಪ್ರಮುಖರಾದ ಪ್ರಮೋದ ಹೆಗಡೆ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ವೆಂಕಟ್ರಮಣ ಬೆಳ್ಳಿ, ನಾಗರಾಜ ಕವಡಿಕೆರೆ, ಸುಬ್ಬಣ್ಣ ಬೋಳ್ಮನೆ ಮುಂತಾದವರು ಮಾತನಾಡಿದರು. ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಉಮೇಶ ಭಾಗ್ವತ್, ಗೋಪಾಲಕೃಷ್ಣ ಗಾಂವ್ಕಾರ್, ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ, ಕೆ.ಟಿ.ಹೆಗಡೆ ಮುಂತಾದವರು ಇದ್ದರು. ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಹಕಾರಿ ಇಲಾಖೆಯ ಜಿಲ್ಲಾ ನಿಬಂಧಕರು ಬಂದು ತಮ್ಮ ಅಹವಾಲನ್ನು ಸ್ವೀಕರಿಸಬೇಕು ಎಂದು ಪ್ರತಿಭಟನಾಕರರು ಸಂಜೆಯ ವರೆಗೂ ಧರಣಿ ನಡೆಸಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಶಿರಸಿ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಆಡಳಿತಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಆಡಳಿತಾಧಿಕಾರಿಯಿಂದ ತಪ್ಪಾಗಿದ್ದರೆ ಷೋಕಾಸ್ ನೋಟೀಸ್ ನೀಡುವುದಾಗಿ ತಿಳಿಸಿದ ಅಜಿತ್ ಶಿರಹಟ್ಟಿ, ಹೋರಾಟಗಾರರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸುವ ಭರವಸೆ ನೀಡಿ ವಾಪಸ್ ತೆರಳಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading