




12-3-2026 ಗುರುವಾರ ಯಲ್ಲಾಪುರ
ಟಿ.ಎಂ.ಎಸ್.ಆಡಳಿತಾಧಿಕಾರಿ ವಜಾಕ್ಕೆ ಆಗ್ರಹಿಸಿ ರಸ್ತೆ ತಡೆ, ಹಿರಿಯ ಅಧಿಕಾರಿಗೆ ಮನವಿ

ಯಲ್ಲಾಪುರ ಪಟ್ಟಣದ ಟಿ.ಎಂ.ಎಸ್.ಸಂಸ್ಥೆಯ ಆಡಳಿತಾಧಿಕಾರಿಯ ವಜಾಕ್ಕೆ ಆಗ್ರಹಿಸುತ್ತಿರುವ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಅವರ ಬೆಂಬಲಿಗರು, ರೈತರಿಂದ ಗುರುವಾರವೂ ಪ್ರತಿಭಟನೆ ಮುಂದುವರಿದಿದ್ದು, ಗುರುವಾರ ಎರಡು ತಾಸು ರಸ್ತೆ ತಡೆ ನಡೆಸಿ, ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಹರಿಹಾಯ್ದರು. ಸಂಸ್ಥೆಯ ಆಡಳಿತಾಧಿಕಾರಿಯ ದುರ್ನಡತೆಯಿಂದ ಸಂಸ್ಥೆಗೆ ಹಾನಿಯಾಗುತ್ತಿದೆ. ಸದಸ್ಯರಿಗೆ ಸಂಕಷ್ಟ ಬಂದೊದಗಿದೆ. ಆಡಳಿತಾಧಿಕಾರಿಯನ್ನು ವಜಾ ಮಾಡದಿದ್ದರೆ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು. ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಯು.ಕೆ.ಬ್ಯಾಂಕ್ ಅಧ್ಯಕ್ಷ ಪ್ರಮೋದ ಹೆಗಡೆ, ಸುಬ್ಬಣ್ಣ ಉದ್ದಾಬೈಲ್, ವಿ.ಎನ್.ಬೆಳ್ಳಿ, ಮಾದೇವ ನಾಯ್ಕ ಮುಂತಾದವರು ಮಾತನಾಡಿದರು.
ಇದನ್ನೂ ಓದಿ: ಟಿ.ಎಂ.ಎಸ್. ಇತಿಹಾಸವೇ ಗೊತ್ತಿಲ್ಲದ ಪ್ರಸಾದ ಹೆಗಡೆ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ!!
ಹಿರಿಯ ಅಧಿಕಾರಿಗೆ ಮನವಿ
ಪ್ರತಿಭಟನಾಕಾರರ ಆಗ್ರಹದಂತೆ ಸ್ಥಳಕ್ಕೆ ಆಗಮಿಸಿದ ಸಹಕಾರಿ ಇಲಾಖೆಯ ಜಿಲ್ಲಾ ನಿಬಂಧಕ ಅಜಮತ್ ಉಲ್ಲಾಖಾನ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ನೀವೇ ನಿಯಮಿಸಿದ ಆಡಳಿತಾಧಿಕಾರಿಯನ್ನು ತಕ್ಷಣ ವಜಾ ಮಾಡಿ ಅಥವಾ ವರ್ಗಾವಣೆ ಮಾಡಬೇಕು. ಅವರು ಕೈಗೊಂಡ ಠರಾವನ್ನು ರದ್ದುಪಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಅಜಮತ್ ಉಲ್ಲಾಖಾನ್ ಮಾತನಾಡಿ, ಆಡಳಿತಾಧಿಕಾರಿಯನ್ನು ವರ್ಗಾವಣೆ ಮಾಡುವ ಅಥವಾ ವಜಾ ಮಾಡುವ ಅಧಿಕಾರ ನನಗಿಲ್ಲ, ಇಲ್ಲಿ ನಡೆದ ವಿದ್ಯಮಾನದ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ವರದಿ ಮಾಡುತ್ತೇನೆ ಎಂದರು.

ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಮ್ಮ ಜೊತೆ ನೀವು ಇಲ್ಲಿಯೇ ಉಳಿಯಬೇಕು, ಬೇಡಿಕೆ ಈಡೇರದ ಹೊರತೂ ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಅಜಮತ್ ಉಲ್ಲಾಖಾನ್ ಮಾತನಾಡಿ ಸಂಜೆಯ ಒಳಗೆ ಆಡಳಿತಾಧಿಕಾರಿಯನ್ನು ವರ್ಗಾಯಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ಆಡಳಿತಾಧಿಕಾರಿಯ ವರ್ಗಾವಣೆ ಅಥವಾ ವಜಾ ಆಗದಿದ್ದರೆ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು.
ಆಡಳಿತಾಧಿಕಾರಿಯ ನಿರ್ಣಯ ಸರಿಯಾಗಿದೆ: ಮುಖಂಡರ ಸಮರ್ಥನೆ
ಟಿ.ಎಂ.ಎಸ್. ಆಡಳಿತಾಧಿಕಾರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ರಾಜಕೀಯ ಪ್ರಹಸನ ಎಂದಿರುವ ಕೆಲವು ಸಹಕಾರಿ ಮುಖಂಡರು. ಆಡಳಿತಾಧಿಕಾರಿಯ ನಿರ್ಣಯವು ಸಹಕಾರಿ ಸಂಘದ ಉಳಿವಿಗೆ ಮಹತ್ವದ್ದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಮುಖರು ಗುರುವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ತಾಲೂಕಾ ಮಾರಾಟ ಸಹಕಾರಿ ಸಂಘ ನಿ. ಯಲ್ಲಾಪುರದ ಹಳೆ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಒಂದು ರಾಜಕೀಯ ಪಕ್ಷದ ಮುಖಂಡರು ಸೇರಿ ಆಡಳಿತಾಧಿಕಾರಿ ರಾಜಿನಾಮೆಗೆ, ಉಚ್ಚಾಟನೆಗೆ ಆಗ್ರಹಿಸಿ ಧರಣಿ, ರಸ್ತಾ ರೋಖೋ ಪ್ರಹಸನವನ್ನು ನಾವು ನೋಡುತ್ತಿದ್ದೇವೆ. ಸಹಕಾರ ಇಲಾಖೆ ಅಧೀನದಲ್ಲಿ ಸಹಕಾರ ಕಾನೂನು ನಿಬಂಧನೆಗಳಂತೆ ಆಡಳಿತ ನಡೆಸುವ ಹೊಣೆಗಾರಿಕೆ ಸಹಕಾರ ಇಲಾಖೆಯದ್ದಾಗಿದೆ. ಅಲ್ಲಿ ಯಾವ ಸದಸ್ಯರಿಗೂ ತೊಂದರೆ ಆಗುವುದಿಲ್ಲ.
ಅಲ್ಲದೇ ನೇಮಕವಾದ ಆಡಳಿತಾಧಿಕಾರಿ ಭಾಸ್ಕರ ನಾಯ್ಕ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸಂಘದ ಆಡಳಿತ ನಡೆಸುತ್ತಿರುವಾಗ ಹಿಂದೆ ಸುಮಾರು 13.50 ಲಕ್ಷದಷ್ಟು ಹಣವನ್ನು ವಕಾಲತು ಫೀಗಾಗಿ ಖರ್ಚು ತೋರಿಸಲಾಗಿದೆ. ಸದರ ಸದಸ್ಯರ ಹಣ ಈ ರೀತಿ ಫೆÇೀಲಾಗುವದನ್ನು ತಡೆಯಲು ಹಾಗೂ ಉಚ್ಛನ್ಯಾಯಾಲಯದಲ್ಲಿರುವ ಪ್ರಕರಣ ಹಿಂತೆಗೆಯಲು ಅವರು ನಿರ್ಧರಿಸಿರುವುದು ನ್ಯಾಯಯುತವಾಗಿದೆ. ಇದೇ ರೀತಿ ವರ್ಷಾನುಗಟ್ಟಲೆ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದರೆ ಆಗುವ ಹಾನಿಗೆ ಯಾರು ಹೊಣೆ? ಅಲ್ಲದೇ ನಾವೇ ಅಧಿಕಾರದಲ್ಲಿರಬೇಕು, ನಮ್ಮ ತಾಳಕ್ಕೆ ಸದಸ್ಯರು ಹೆಜ್ಜೆ ಹಾಕಬೇಕು ಎಂದು ಖುರ್ಚಿಗೆ ಅಂಟಿಕೊಂಡು ಇರಬೇಕು ಅಂತಾ ಈ ರೀತಿ ಹೋರಾಟ ಮಾಡುವುದು ಹಿರಿಯ ಸಹಕಾರಿಗಳಿಗೆ ಶೋಭೆ ತರುವಂತದದ್ದಲ್ಲ. ಬರೇ ಶಾಸಕರನ್ನು ಹಾಗೂ ನಿವೃತ್ತ ಕಾರ್ಯನಿರ್ವಾಹಕರನ್ನು ದೂಷಿಸಿ ತಾವು ಹೆಸರುಗಳಿಸುವುದು ಎಂತಾ ಭಾವಿಸಿದ್ದರೆ ಅದು ಮೂರ್ಖತನದ ಪರಮಾವಧಿ.
ತಾಲೂಕಾ ಮಾರಾಟ ಸಹಕಾರಿ ಸಂಘ ಯಲ್ಲಾಪುರ ಈ ಹಿಂದಿನಿಂದಲೂ ಅನೇಕ ತಾಲೂಕಿನ ಹಿರಿಯ ಸಹಕಾರಿಗಳ ಸಹಕಾರ ಮಾರ್ಗದರ್ಶನ ಆಡಳಿತದಲ್ಲಿ ಬೆಳೆದು ಬಂದಿದೆ. ಹಳೆದ ಹತ್ತು ವರ್ಷದಲ್ಲಿ ಆದ ಅಭಿವೃದ್ಧಿಗೆ ತಳಪಾಯ ಹಾಕಿದ ಹಿರಿಯ ಸಹಕಾರಿಗಳನ್ನು ಹಾಗೂ ನೌಕರರನ್ನು ಸ್ಮರಿಸದೇ ತಾನೇ ಸರ್ವಾಧಿಕಾರಿ ಎಂದು ಬಿಂಬಿಸುವುದು ಸರಿಯಲ್ಲ. ಈಗಿನ ಆಡಳಿತಾಧಿಕಾರಿಗಳು ಅವರ ವಿವೇಚನೆಯಂತೆ ಠರಾಯಿಸಿದ್ದು, ಸಹಕಾರಿ ಸಂಘದ ಉಳಿವಿಗೆ ಮಹತ್ವದ್ದಾಗಿದೆ ಎಂದು ಆರ್.ಎಸ್.ಭಟ್ಟ ದೇಸಾಯಿಮನೆ, ಎಸ್.ಕೆ.ಭಾಗ್ವತ್ ಗಾಣಗದ್ದೆ, ರವಿ ಭಟ್ಟ ಬರಗದ್ದೆ,ವಿ.ಎಸ್.ಭಟ್ಟ ಉಪ್ಪಳೇಶ್ವರ, ನವೀನ ಹೆಗಡೆ ಬೆದೆಹಕ್ಲು,ಮುರಳಿ ಹೆಗಡೆ ಇಡಗುಂದಿ, ಗಣೇಶ ಹೆಗಡೆ ಪಣತಗೇರಿ, ನಾರಾಯಣ ಭಟ್ಟ ಬಟ್ಲಗುಂಡಿ, ಟಿ.ವಿ.ಭಾಗ್ವತ್ ನಂದೊಳ್ಳಿ, ಕೃಷ್ಣ ಶೇಟ್ಟಿ ಕಣ್ಣಿಗೇರಿ, ಸುಬ್ಬಣ್ಣ ಕುಂಟೆಕಳಿ ಮುಂತಾದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS




















