ಟಿ.ಎಂ.ಎಸ್. ಇತಿಹಾಸವೇ ಗೊತ್ತಿಲ್ಲದ ಪ್ರಸಾದ ಹೆಗಡೆ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ!
ಟಿ.ಎಂ.ಎಸ್. ಉಳಿಸಿ ಎಂಬ ಪ್ರಹಸನದ ಕೆಲವೇ ಕೆಲವು ಜನರ ಹೋರಾಟದಲ್ಲಿ ಬಿ.ಜೆ.ಪಿ. ಮಂಡಲಾಧ್ಯಕ್ಷ ಪ್ರಸಾದ ಹೆಗಡೆಯವರ ಬಾಲಿಷಹೇಳಿಕೆಯನ್ನು ನಾವು ಖಡಾಖಂಡಿತವಾಗಿ ಖಂಡಿಸುತ್ತೇವೆ. ಸಹಕಾರಿ ಕ್ಷೇತ್ರದ ಕಿಂಚಿತ್ತು ಅನುಭವ ಹೊಂದಿರದ ಪ್ರಸಾದ ಹೆಗಡೆ ರಾಜ್ಯ ಮಟ್ಟದ ಶ್ರೇಷ್ಟ ಸಹಕಾರಿಗಳಲ್ಲಿ ಓರ್ವರಾದ ಜನಪ್ರಿಯ ಶಾಸಕರೂ ಆದ ಶಿವರಾಮ ಹೆಬ್ಬಾರ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಹೊಂದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ಹೇಳಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜಕೀಯದಲ್ಲಿ ಪ್ರಸಾದ ಹೆಗಡೆ ಇನ್ನೂ ಹಸುಗೂಸು, ಅವರಿಗೆ ಟಿ.ಎಂ.ಎಸ್.ನ ಇತಿಹಾಸವೂ ಗೊತ್ತಿಲ್ಲ. ನಿಮಗೆ ಯಾರ್ಯಾರೋ ಹಿರಿಯರು ಕಟ್ಟಿದ ಸಂಸ್ಥೆಯಲ್ಲಿ ಈಗ ಬಂದು ಕುಳಿತು ಸರ್ವಾಧಿಕಾರಿ ಧೋರಣೆಯೊಂದಿಗೆ ತಾವೇ ಸಂಸ್ಥೆಯನ್ನು ಕಟ್ಟಿದ್ದು ಎಂದರೆ ಅದನ್ನು ನಂಬುವಷ್ಟು ಮೂರ್ಖರು ನಮ್ಮ ತಾಲೂಕಿನ ರೈತರಲ್ಲ ಎನ್ನುವುದು ಇವತ್ತಿನ ನಿಮ್ಮ ಪ್ರಹಸನದಲ್ಲಿ ಭಾಗವಹಿಸಿದ ಜನಸಂಖ್ಯೆಯನ್ನು ನೋಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಇಡೀ ಜಿಲ್ಲೆಯ ಸಹಕಾರಿಗಳು ಮಾನ್ಯ ಹೆಬ್ಬಾರರವರ ನಾಯಕತ್ವವನ್ನು ಒಪ್ಪಿ ಅವರಿಗೆ ಕೆ.ಡಿ.ಸಿ.ಸಿ. ನಾಯಕತ್ವವನ್ನು ವಹಿಸಿದ್ದು ಮಾನ್ಯ ಹೆಬ್ಬಾರ ರವರ ಸಹಕಾರಿ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸತತವಾಗಿ ಆರು ಬಾರಿ ಕೆ.ಡಿ.ಸಿ.ಸಿ. ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಜನರು ಸತತ ನಾಲ್ಕನೇ ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಎಪಿಎಂಸಿ ಹೆಬ್ಬಾರರೆಂದೇ ಜನಜನಿತವಾದ ಮಾನ್ಯ ಹೆಬ್ಬಾರ ಕೊಡುಗೆಯಿಂದಾಗಿ ಎ.ಪಿ.ಎಂ.ಸಿ., ಟಿ.ಎಂ.ಎಸ್. ಇನ್ನೂ ಹಲವಾರು ಸಂಘ ಸಂಸ್ಥೆಗಳಾಗಿವೆ. ಇಂತಹ ಶ್ರೇಷ್ಟ ಸಹಕಾರಿ ಮಾನ್ಯ ಹೆಬ್ಬಾರರವರ ಕುರಿತು ಪ್ರಶ್ನಿಸುವ ನೈತಿಕತೆ ಪ್ರಸಾದ ಹೆಗಡೆಯರೇ ನಿಮಗೆ ಇದೆಯೇ? ಸಹಕಾರಿ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಶೂನ್ಯವಾಗಿರುವಾಗ ಬೇರೆಯವರ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ?. ನಿಮಗೇನಾದರೂ ಮಾನ, ಮರ್ಯಾದೆ ಇದೆಯಾ? ಎಂದು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಿ. ಮಾನ್ಯ ಹೆಬ್ಬಾರ ಅವರ ಅನುಭವದಷ್ಟು ನಿಮಗಿನ್ನೂ ವಯಸ್ಸಾಗಿಲ್ಲ. ನೀವು ಇನ್ನೂ ಹಸುಗೂಸು. ಅರಿತು ಮಾತನಾಡಿ ಎಂದು ವಿ.ಎಸ್.ಭಟ್ಟ ಎಚ್ಚರಿಸಿದ್ದಾರೆ.