ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಕೆಂಪು ಬಣ್ಣದ ಕ್ಯಾಂಟರ್ ವಾಹನವು ಪಾದಚಾರಿಗೆ ಡಿಕ್ಕಿಯಾದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಶೀರ್ಲೆ ಪಾಲ್ಸ್ ತಿರುವಿನಲ್ಲಿ ನಡೆದಿದೆ.
ಆರೋಪಿ ಕ್ಯಾಂಟರ್ ಚಾಲಕನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡುಹೋಗಿ, ಮೊದಲಿಗೆ ಬೊಲೆರೋ ವಾಹನಕ್ಕೆ ಡಿಕ್ಕಿಹೊಡೆದು, ನಂತರ ಶೀರ್ಲೆ ಫಾಲ್ಸ್ ಕ್ರಾಸ್ ಸಮೀಪ ಹೆದ್ದಾರಿಯಲ್ಲಿ ನಡೆದುಕೊಂಡುಹೋಗುತ್ತಿದ್ದ ಪಾದಚಾರಿ ಭಿಕ್ಷುಕನಿಗೆ ಡಿಕ್ಕಿಹೊಡೆದ ಪರಿಣಾಮ ಅಂದಾಜು 40 ರಿಂದ 42 ವರ್ಷ ವಯಸ್ಸಿನ ಭಿಕ್ಷುಕನು ಮೃತಪಟ್ಟಿದ್ದಾನೆ.
ಘಟನೆಯ ನಂತರ ಚಾಲಕನು ವಾಹನವನ್ನು ಸ್ಥಳದಿಂದ ಚಲಾಯಿಸಿಕೊಂಡು ಹೋಗಿದ್ದು, ವಾಹನದ ಬಗ್ಗೆ ಹಾಗೂ ಚಾಲಕನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕ್ರೇನ್ ಚಾಲಕ ಸುಫಿಯಾನ್ ಕರೀಂ ಖಾನ್ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಕಳಚೆ ಬಸ್
ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಚಿಟ್ಪಾಲ್ ಮುರಿ ಕ್ರಾಸ್ ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಚಲಿಸಿ, ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾದ ಘಟನೆ ರವಿವಾರ ನಡೆದಿದೆ.
ಸಂಜೆ ನಾಲ್ಕು ಗಂಟೆಗೆ ಯಲ್ಲಾಪುರದಿಂದ ಹೊರಟ ಬಸ್ಸಿನಲ್ಲಿ 15 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆ ನಡೆದ ಸಮೀಪವೇ ಆಳವಾದ ಪ್ರಪಾತವಿದ್ದು, ಅದೃಷ್ಟವಶಾತ್ ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ.