







ಸಿಲೆಂಡರ್ ಗ್ಯಾಸ್ ಸಮಸ್ಯೆಗೆ ಪರಿಹಾರ ಒದಗಿಸಿದ ಗೋಬರ್ ಧನ್ ಘಟಕ

ವಿಶೇಷ ಲೇಖನ
ಶಿರಸಿ ತಾಲ್ಲೂಕಿನ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠವು ತನ್ನ ಆವರಣದಲ್ಲಿ ಗೋಶಾಲೆ ಹೊಂದಿದ್ದು, ಈ ಗೋಶಾಲೆಯಲ್ಲಿ ದೇಶೀಯ ತಳಿಯ ಸುಮಾರು 80 ಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಲಾಗಿದ್ದು,ಮಠಕ್ಕೆ ಆಗಮಿಸುವ ಭಕ್ತರು ಹಾಗೂ ಪಾಠ ಶಾಲೆಯಲ್ಲಿ ಸುಮಾರು 180 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ನದಾಸೋಹ ನಡೆಯುತ್ತಿದೆ. ವಿವಿಧ ಹಬ್ಬ ಹರಿದಿನಗಳ ಸಮಯದಲ್ಲಿ ಹಾಗೂ ಜಯಂತಿಗಳು, ನವರಾತ್ರಿ ಉತ್ಸವ ಇತರೆ ವಿಶೇಷ ದಿನಗಳಲ್ಲಿ ಸರಿಸುಮಾರು 2000 ಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ನಡೆಯುತ್ತದೆ.

ಗೋವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರತಿದಿನ ಈ ಗೋಶಾಲೆಯಲ್ಲಿ 350 ದಿಂದ 400 ಕೆ.ಜಿ ಗೂ ಹೆಚ್ಚು ಸಗಣಿ ಸಂಗ್ರಹಿಸಲ್ಪಡುತ್ತಿದ್ದದ್ದನ್ನು ಮನಗಂಡು 2024-25 ನೇ ಸಾಲಿನಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ, ಈ ಗೋಶಾಲೆಯಲ್ಲಿ ಪ್ರತ್ಯೇಕವಾಗಿ 40 ಕ್ಯೂಬಿಕ್ ಮೀಟರ್ ಸಾಮಥ್ರ್ಯದ ಗೋಬರ್‍ಧನ್ ಘಟಕವನ್ನು ನಿರ್ಮಿಸಲಾಯಿತು.
ಈ ಘಟಕ ನಿರ್ಮಾಣಕ್ಕೆ ಒಟ್ಟು 11.05 ಲಕ್ಷಗಳನ್ನು ಖರ್ಚು ಮಾಡಲಾಗಿದ್ದು, ಇದರಲ್ಲಿ 10.45 ಲಕ್ಷಗಳನ್ನು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಭರಿಸಲಾದರೆ ಇನ್ನುಳಿದ ಘಟಕ ನಿರ್ಮಾಣ ಮೊತ್ತವನ್ನು ಮಠವೇ ಭರಿಸಿದೆ. ಇದೀಗ ಗೋಶಾಲೆಯಲ್ಲಿ ಸಂಗ್ರಹವಾಗುವ ಸಗಣಿಯಲ್ಲಿ ಪ್ರತಿ ದಿನ 350 ರಿಂದ 400 ಕೆ.ಜಿಗಳಷ್ಟು ಸಗಣಿಯನ್ನು ಗೋಬರ್‍ಧನ್ ಘಟಕಕ್ಕೆಂದೇ ಬಳಸಿಕೊಂಡು, ಪ್ರತಿದಿನ 15 ರಿಂದ 18 ಕೆ.ಜಿಗಳಷ್ಟು ಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದ್ದು, ಈ ಘಟಕದಿಂದ ಉತ್ಪಾದನೆಯಾದ ಗ್ಯಾಸ್‍ನ್ನು ಅನ್ನದಾಸೋಹಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಈ ಮೊದಲು ಅನ್ನದಾಸೋಹಕ್ಕೆಂದೇ ಎಲ್.ಪಿ.ಜಿ ಸಿಲಿಂಡರ್ ಗೆ ಪ್ರತಿ ವಷF 2 ರಿಂದ 2.50 ಲಕ್ಷಗಳನ್ನು ಖರ್ಚು ಮಾಡಲಾಗುತ್ತಿತ್ತು. ಇದೀಗ ಈ ಹಣ ಸಂಪೂರ್ಣ ಉಳಿತಾಯವಾಗುತ್ತಿದ್ದು, ಘಟಕದಿಂದ ಹೊರಬರುವ ಸಗಣಿಯಿಂದ ಸಾವಯವ ಗೊಬ್ಬರವನ್ನೂ ತಯಾರು ಮಾಡಲಾಗುತ್ತಿದೆ.
ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದ ಜಾನುವಾರುಗಳ ಸಗಣಿ, ಹಸಿ ಕಸದಂತಹ ಜೈವಿಕ ತ್ಯಾಜ್ಯ ಹೆಚ್ಚು ಉತ್ಪಾದನೆಯಾಗುವ ಪ್ರದೇಶಗಳಲ್ಲಿ ಪಿಪಿಪಿ (ಖಾಸಗಿ ಸರ್ಕಾರಿ ಸಹಭಾಗಿತ್ವ) ಅನುಪಾತದಲ್ಲಿ ಗೋಬರ್‍ಧನ್ ಘಟಕಗಳ ಸ್ಥಾಪನೆಗೆ ಯೊಜನೆಯಡಿ ಅನುವು ಮಾಡಿಕೊಟ್ಟಿದೆ.
ಸ್ವರ್ಣವಲ್ಲಿ ಮಠದಲ್ಲಿ ಸ್ಥಾಪಿಸುವ ಮೂಲಕ ನವೀಕರಿಸಬಹುದಾದ ಇಂಧನದ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಸಿ ತ್ಯಾಜ್ಯದಿಂದ ಕೇವಲ ಗೊಬ್ಬರವನ್ನಷ್ಟೇ ಅಲ್ಲದೆ ಮಿಥೇನ್ ಅನಿಲವನ್ನು ಕೂಡ ಉತ್ಪಾದನೆ ಮಾಡಬಹುದಾಗಿದ್ದು, ಈ ಅನಿಲವನ್ನು ಅಡುಗೆ ಮಾಡಲು ಹಾಗೂ ವಿದ್ಯುತ್ ಆಗಿಯೂ ಕೂಡ ಬಳಕೆ ಮಾಡಿಕೊಳ್ಳಬಹುದಾಗಿದೆ. ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಗೋಶಾಲೆ ಅನ್ನದಾಸೋಹ ಹೊಂದಿರುವ ಮಠ ಮಾನ್ಯಗಳಲ್ಲಿ ಗೋಬರ್‍ಧನ್ ಘಟಕಗಳನ್ನು ನಿರ್ಮಾಣ ಮಾಡಬಹುದಾಗಿದ್ದು, ಪ್ರಸ್ತುತ ಸ್ವರ್ಣವಲ್ಲಿ ಮಠದಲ್ಲಿ ನಿರ್ಮಿಸಲಾಗಿರುವ ಗೋಬರ್‍ಧನ್ ಘಟಕಗಳ ಸದುಪಯೋಗವಾಗುತ್ತಿದ್ದು, ಎಲ್.ಪಿ.ಜಿ ಗ್ಯಾಸ್ ಮೇಲಿನ ಅವಲಂಬನೆ ಸಂಪೂರ್ಣವಾಗಿ ಇಲ್ಲವಾಗಿದೆ. ಪಿಪಿಪಿ (ಖಾಸಗಿ ಸರ್ಕಾರಿ ಸಹಭಾಗಿತ್ವ) ಮಾಡೆಲ್‍ನಲ್ಲಿ ಜಿಲ್ಲೆಯಲ್ಲಿ ಮಾಡಲಾಗಿರುವ ಈ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.
ಸಮುದಾಯ ಹಂತದಲ್ಲಿ ಮಾತ್ರವಲ್ಲದೇ ವೈಯುಕ್ತಿಕವಾಗಿ ಮನೆಗಳಲ್ಲೂ ಗೋಬರ್ ಧನ್ ಘಟಕವನ್ನು ನಿರ್ಮಿಸಬಹುದಾಗಿದ್ದು, ಮನೆಗಳಲ್ಲಿ ಜಾನುವಾರುಗಳು, ಸಾಕಷ್ಟ್ಟು ಹಸಿ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿದ್ದರೆ ಅದರಿಂದಲೇ ಬಯೋಗ್ಯಾಸ್ ಉತ್ಪಾದಿಸಬಹುದು. ಮನೆಯಲ್ಲಿ ಪ್ರತಿದಿನ ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಣ್ಣು, ತರಕಾರಿಗಳ ತ್ಯಾಜ್ಯ, ಉಳಿದ ಆಹಾರಗಳು ಜೊತೆಗೆ ಕೃಷಿ ತ್ಯಾಜ್ಯಗಳನ್ನು ಗೋಬರ್ ಧನ್ ಘಟಕಕ್ಕೆ ಬಳಸಬಹುದು. ಗೋಬರ್ ಧನ್ ಘಟಕದಿಂದ ಉತ್ಪತ್ತಿಯಾಗುವ ಸ್ಲರಿ ಕೂಡ ಕೃಷಿಗೆ ಅತ್ಯಂತ ಉಪಯುಕ್ತ ಗೊಬ್ಬರ. ಇದೇ ಸ್ಲರಿಯಿಂದ ಎರೆಹುಳ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಆರ್ಥಿಕ ಲಾಭ ಗಳಿಸಬಹುದು. ಹಸಿ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಹಾಗೂ ಆರ್ಥಿಕ ಸದೃಢತೆಗೆ ಗೋಬರ್ ಧನ್ ಘಟಕ ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಅನುಮಾನವಿಲ್ಲ.
ಮಠದ ಗೋಶಾಲೆಗೆ ಸರ್ಕಾರದಿಂದ ನೀಡಿರುವ ಸಮುದಾಯ ಹಂತದ ಗೋಬರ್ ಗ್ಯಾಸ್ ಘಟಕವು ಅತ್ಯಂತ ಉಪಯುಕ್ತವಾಗಿದೆ ಇದರಿಂದಾಗಿ ಗೋ ಶಾಲೆಯ ಸಗಣೆ ಹಾಗೂ ಹಸಿ ತ್ಯಾಜ್ಯದ ಮೂಲಕ ಉತ್ಪಾದನೆಯಾಗುವ ಮಿಥೇನ್ ಗ್ಯಾಸ್ ಅನ್ನದಾಸೋಹದ ಅಡುಗೆಗೆ ಉಪಯುಕ್ತವಾಗಿದೆ. ಇದರಿಂದ ಸಿಲಿಂಡರ್ ಕೊರತೆಯ ಸಂದರ್ಭದಲ್ಲಿ ಅತ್ಯಂತ ಉಪಯುಕ್ತವಾಗಿದೆ. ಪರಿಸರ ಸ್ನೇಹಿಯಾದ ಇಂತಹ ಯೋಜನೆಯನ್ನು ಅನ್ನದಾಸೋಹ ನಡೆಯುವ ಮಠ, ಸಂಸ್ಥೆಗಳಿಗೆ ನೀಡಿದರೆ ಅತ್ಯಂತ ಉಪಯುಕ್ತವಾಗುತ್ತದೆ.: ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ.
ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಅಡಿ ಜಿಲ್ಲೆಯಲ್ಲಿ ಒಟ್ಟು ಐದು ಗೋಬರ್ಧನ್ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಈ ಪೈಕಿ ಕಳೆದ ಸಾಲಿನಲ್ಲಿ ಶಿರಸಿ ಸ್ವರ್ಣವಲ್ಲಿ ಸೋಂದಾ ಮಠಕ್ಕೆ ಗೋ ಬರ್‍ಧನ್ ಘಟಕವನ್ನು ಮಂಜೂರು ಮಾಡಲಾಗಿತ್ತು. ಅದರಂತೆ ಸದರಿ ಘಟಕವನ್ನು ನಿರ್ಮಾಣ ಮಾಡಿ ಪ್ರಸ್ತುತ ಅನ್ನದಾಸೋಹ ಕೇಂದ್ರಕ್ಕೆ ಗೋಬರ್-ಗ್ಯಾಸ್ ಅನ್ನೇ ಬಳಸಿ ಅಡುಗೆ ತಯಾರಿಸಲಾಗುತ್ತಿದೆ. ಇದರಿಂದಾಗಿ ಕಮರ್ಷಿಯಲ್ ಗ್ಯಾಸ್ ಸಿಲೆಂಡರ್ ಬಳಕೆ ಕಡಿಮೆ ಆಗುವುದಲ್ಲದೆ ಮಠಕ್ಕೂ ಸಹ ಹಣಕಾಸಿನ ಉಳಿತಾಯವಾಗುತ್ತಿದೆ. ಈ ಯೋಜನೆಯ ಪ್ರಗತಿಯಲ್ಲಿ ನಮ್ಮ ಜಿಲ್ಲೆಯು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಡಾ.ದಿಲೀಷ್ ಸಶಿ.
ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಶಾಲವಾಗಿದ್ದು, ಈ ಜಿಲ್ಲೆಯಲ್ಲಿ ಹೆಚ್ಚಿನ ಗೋಶಾಲೆಗಳು ಹಾಗೂ ಅನ್ನದಾಸೋಹ ಕೇಂದ್ರಗಳು ನಡೆಯುತ್ತಿದ್ದು, ಇಲ್ಲಿ ಸ್ವಚ್ಛ ಭಾರತ್ ಮಿಷನ ಯೋಜನೆಯ ಗೋಬರ್‍ಧನ್ ಘಟಕ ಹೆಚ್ಚು ಪರಿಣಾಮಕಾರಿಯಾಗಿದ್ದು, ಸರ್ಕಾರಿ ಖಾಸಗಿ ಸಹಭಾಗಿತ್ವದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನÀಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯ ಹಂತದಲ್ಲಿ ಕಾರ್ಯನಿರ್ವಹಿಸುವ ಅನ್ನದಾಸೋಹ ಕೇಂದ್ರ, ಸಮುದಾಯ ಭವನಗಳಲ್ಲಿ, ಗೋಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ: ಎಮ್.ಎಸ್.ಅಲ್ಲಾಬಕಷ್, ಉಪ ಕಾರ್ಯದರ್ಶಿ(ಆಡಳಿತ), ಜಿ.ಪಂ. ಉತ್ತರ ಕನ್ನಡ.

====================
















