ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಜಯಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಯಲ್ಲಾಪುರದಲ್ಲಿ ಸೋಮವಾರ ಸಂಜೆ ಸಂಭ್ರಮಾಚರಣೆ ಮತ್ತು ವಿಜಯೋತ್ಸವ ನಡೆಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿಜಯೋತ್ಸವದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿರುವುದು ಐತಿಹಾಸಿಕ ವಿಜಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ದುರಾಡಳಿತ ಕೊನೆಗೊಂಡಿದೆ. ಪ್ರಧಾನಿ ಮೋದಿಯವರ ಹಾಗೂ ಅಮಿತ್ ಶಾ ಅವರ ನೇತ್ರತ್ವದಲ್ಲಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ದೊರೆತಿದೆ , ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಎಂದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ದೇಶವಿರೋಧಿ ಶಕ್ತಿಗಳನ್ನು, ಧರ್ಮವಿರೋಧಿಗಳನ್ನು ಈ ಚುನಾವಣೆಯಲ್ಲಿ ಮತದಾರರು ಸೋಲಿಸಿ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಮುಖಂಡರಾದ ಪ್ರಮೋದ ಹೆಗಡೆ ಮಾತನಾಡಿ, ಪಶ್ಚಿಮ ಬಂಗಾದಲ್ಲಿನ ಕೆಟ್ಟ ಆಡಳಿತಕ್ಕೆ ಈ ಚುನಾವಣೆಯಲ್ಲಿ ಇತಿಶ್ರೀ ಹಾಡಲಾಗಿದೆ. ಹೊಸ ಅಧ್ಯಾಯ ಆರಂಭಗೊಂಡಿದೆ. ಸನಾತನ ಧರ್ಮದ ವಿರೋಧಿಗಳಿಗೆ ಜನರು ಪಾಠ ಕಲಿಸಿದ್ದಾರೆ ಎಂದರು.