ಭಕ್ತಿ, ಪ್ರಾಮಾಣಿಕತೆ, ಪ್ರಯತ್ನಶೀಲತೆ ಇದ್ದರೆ ಯಶಸ್ಸು: ಸ್ವರ್ಣವಲ್ಲೀ ಶ್ರೀ
ಭಕ್ತಿಯ ಜೊತೆಗೆ, ಪ್ರಾಮಾಣಿಕತೆ, ಪ್ರಯತ್ನಶೀಲತೆ ಸತತವಾಗಿದ್ದರೆ ಯಶಸ್ಸು ಸಿಗುತ್ತದೆ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ನುಡಿದರು.
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪತಿಷತ್ ಬಜರಂಗದಳ ಕರ್ನಾಟಕ ಉತ್ತರ ಪ್ರಾಂತ್ಯ ಶೌರ್ಯ ಪ್ರಶಿಕ್ಷಣ ವರ್ಗ ಶಿಬಿರದಲ್ಲಿ ಸೋಮವಾರ ಸಂಜೆ ಆಶೀರ್ವಚನ ನೀಡಿ ಮಾತನಾಡಿದ ಅವರು,
ನಮ್ಮ ದೇಶದ ಬಗ್ಗೆ, ನಮ್ಮ ಧರ್ಮದ ಬಗ್ಗೆ, ಸಮಾಜದ ಬಗ್ಗೆ ಸಮರ್ಪಣಾ ಭಾವನೆ ಇರಬೇಕು, ಇದು ನಿಜವಾದ ಶಕ್ತಿಯಾಗಿದ್ದು, ಸಮರ್ಪಣಾ ಮನೋಭಾವನೆಯ ಜೊತೆ ನಿಸ್ವಾರ್ಥ ಚಿಂತನೆಯಿಂದ ನಮ್ಮ ಗೌರವ, ವಿಶ್ವಾಸ ಹೆಚ್ಚುತ್ತದೆ ವಿನಯದಿಂದ ಇರುವವರು ಬೆಳೆಯುತ್ತಾರೆ, ಅಹಂಕಾರ ಇದ್ದರೆ ಅಂತಹ ವ್ಯಕ್ತಿಯ ಬೆಳವಣಿಗೆ ಕುಂಠಿತವಾಗುತ್ತದೆ,
ಸಮುದಾಯ, ವ್ಯಕ್ತಿ, ಸಮಾಜ, ಕುಟುಂಬ ಬಿದ್ದುಹೋಗುತ್ತಿರುವುದನ್ನು ಮೇಲೆತ್ತುವುದೇ ಶೌರ್ಯ ಎಂದರು. ಗೋಹತ್ಯೆ ತಡೆಯುವುದು ಪವಿತ್ರವಾದ ಕೆಲಸವಾಗಿದೆ, ಮಾದಕ ವ್ಯಸನ, ಮತಾಂತರ ತಡೆಯುವ ನಿಟ್ಟಿನಲ್ಲಿ ಹಿಂದೂ ಸಮಾಜ ಇನ್ನಷ್ಟು ಜಾಗೃತವಾಗಬೇಕು ಎಂದರು.
ವಿಶ್ವಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ್ಯದ ಉಪಾಧ್ಯಕ್ಷ ಗಂಗಾಧರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ ಏಕಾನ್, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಅನಂತ ಗಾಂವ್ಕಾರ್ ಮುಂತಾದವರು ಇದ್ದರು.