ಯಲ್ಲಾಪುರ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ(ಎಲ್.ಎಸ್.ಎಂ.ಪಿ) ವಜ್ರಮಹೋತ್ಸವ ಮತ್ತು ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿದ ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಜಿಲ್ಲೆಯ ಸಹಕಾರಿ ಸಂಘಗಳು ರೈತರ ಬೆನ್ನೆಲುಬಾಗಿ, ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ,

ಇದನ್ನೂ ಓದಿ: ಆಸೆಗೆ ಪರಿಮಿತಿ ಇಟ್ಟುಕೊಂಡು ಕೆಲಸ ಮಾಡಬೇಕು: ಸ್ವರ್ಣವಲ್ಲೀ ಶ್ರೀ

ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯವಿದೆ. ಎಲ್.ಎಸ್.ಎಂ.ಪಿ ಸೊಸೈಟಿಯು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿಕೆಲಸ ನಿರ್ವಹಿಸುತ್ತಿದೆ. ಈ ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಮಾತನಾಡಿ, ವಜ್ರಮಹೋತ್ಸವ ಹಾಗೂ ನೂತನ ಕಟ್ಟಡದ ಲೋಕಾರ್ಪಣೆಯ ಈ ಸಂದರ್ಭವು ನಮ್ಮ ಸಂಘದ ಐತಿಹಾಸಿಕ ಮೈಲಿಗಲ್ಲಾಗಿದೆ. 3500ಕ್ಕೂ ಅಧಿಕ ಸದಸ್ಯರನ್ನು ಹೊಂದಿದ ನಮ್ಮ ಸಂಘವು ಸದಸ್ಯರ ಏಳಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಸಹಕಾರ, ಪ್ರಾಮಾಣಿಕ ವ್ಯವಹರದಿಂದ ಸಂಸ್ಥೆ ಅಭಿವೃದ್ಧಿಯಾಗಿದೆ. ರೈತರ ಮತ್ತು ನಮ್ಮ ಗ್ರಾಹಕರ ಅನುಕೂಲಕ್ಕಾಗಿ ನಾವು ಹಲವಾರು ವಿಶಿಷ್ಟ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದೇವೆ, ಸದಸ್ಯರ ಹಿತಕಾಯಲು ನಾವು ಬದ್ಧರಿದ್ದೇವೆ, ರೈತರ ಜೊತೆ ನಾವಿದ್ದೇವೆ ಎಂದರು.

ಇದನ್ನೂ ಓದಿ: LSMP ಮಾಜಿ ಅಧ್ಯಕ್ಷರು, ಮಾಜಿ ಮುಖ್ಯ ಕಾರ್ಯನಿರ್ವಾಹಕರಿಗೆ ಸನ್ಮಾನ

ಸಂಘದ ಮೀಟಿಂಗ್ ಹಾಲ್ ಉದ್ಘಾಟಿಸಿದ ಟಿ.ಎಸ್.ಎಸ್.ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ಅನೇಕ ಕಷ್ಟದ ಸಂದರ್ಭಗಳಲ್ಲಿಯೂ ಗೆದ್ದು ಬಂದಿದೆ, ನಾವು ಹಿರಿಯ ಸಹಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು, ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ದೇಶಕ್ಕೆ ಮಾದರಿಯಾಗಿದೆ, ಸದಸ್ಯರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಬೇಕು, ಶುದ್ಧವಾದ ಸಹಕಾರಿ ತತ್ವವನ್ನು ಅನುಸರಿಸಿ, ಒಗ್ಗಟ್ಟಿನ ಮೂಲಕ ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ, ವಯಕ್ತಿಕ ದ್ವೇಷ ಮುಂತಾದವುಗಳಿಗೆ ಆಸ್ಪದ ನೀಡಬಾರದು, ಸಹಕಾರಿ ಕ್ಷೇತ್ರ ಬೆಳೆದರೆ ರೈತರೂ ಬೆಳೆಯುತ್ತಾರೆ, ಆರ್ಥಿಕವಾಗಿಯೂ ಸಬಲರಾಗಲು ಸಾಧ್ಯವಿದೆ. ಅಡಿಕೆ ಬೆಳೆಗಾರರ ಹಿತಕಾಯುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು, ಅಡಿಕೆ ಮಂಡಳಿ ಸ್ಥಾಪಿಸುವ ಕೆಲಸ ಸರ್ಕಾರದಿಂದ ಆಗಬೇಕು ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್.ಎಸ್.ಎಂ.ಪಿ.ಸೊಸೈಟಿಗೆ ಭೇಟಿನೀಡಿ ಸಭಾಭವನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಗೇರಿಯವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸಮಾರಂಭದಲ್ಲಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್, ರಾಮನಗುಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಭಟ್ಟ, ಮಲೆನಾಡು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ಟಿ.ಎಸ್.ಎಸ್.ನಿರ್ದೇಶಕ ಕೃಷ್ಣ ಹೆಗಡೆ,

ಎಲ್.ಎಸ್.ಎಂ.ಪಿ ಸಂಘದ ನಿರ್ದೇಶಕರಾದ ಆರ್.ಎಸ್.ಭಟ್, ತಿಮ್ಮಣ್ಣ ಘಟ್ಟಿ, ಅಪ್ಪು ಆಚಾರಿ, ಎಂ.ಎನ್.ಭಟ್ಟ, ಗ್ಯಾಬ್ರಿಯಲ್ ಫನಾರ್ಂಡೀಸ್, ಹನುಮಂತ ಕೊರವರ್, ಶ್ಯಾಮಲಾ ಹೆಗಡೆ, ಪ್ರಭಾ ಭಾಗ್ವತ್, ಶಕುಂತಲಾ ಸಿದ್ದಿ, ಗೋಪಾಲಕೃಷ್ಣ ಭಟ್ಟ, ರಾಘವೇಂದ್ರ ಭಟ್ಟ, ಗಣಪತಿ ಭಟ್ಟ ಕವಡಿಕೇರಿ, ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್.ಹೆಗಡೆ ಮುಂತಾದವರು ಇದ್ದರು.

ಸಮಾರಂಭದ ಆರಂಭದಲ್ಲಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. ಪ್ರಿಯಾ ಭಟ್ಟ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಟಿ.ಆರ್.ಹೆಗಡೆ ಸ್ವಾಗತಿಸಿದರು, ನಿರ್ದೇಶಕ ನರಸಿಂಹ ಕೋಣೆಮನೆ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಸುಬ್ರಾಯ ದಾನ್ಯಾನಕೊಪ್ಪ ನಿರ್ವಹಿಸಿದರು. ಮಹಾಬಲೇಶ್ವರ ಭಟ್ಟ ವಂದಿಸಿದರು.

ಸಮಾರಂಭಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಬೆಳಿಗ್ಗೆ ಇಡ್ಲಿ ಸಾಂಬಾರ್, ಶಿರಾ, ಚಹಾ ವಿತರಿಸಲಾಯಿತು. ಮಧ್ಯಾಹ್ನ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading