L.S.M.P ಮಾಜಿ ಅಧ್ಯಕ್ಷರು, ಮಾಜಿ ಮುಖ್ಯ ಕಾರ್ಯನಿರ್ವಾಹಕರಿಗೆ ಸನ್ಮಾನ
ಬಡತನ, ಕಷ್ಟಗಳೇ ಹೆಚ್ಚಾಗಿದ್ದ ಕಾಲದಲ್ಲಿ ನಮ್ಮ ಹಿರಿಯರು, ಭವಿಷ್ಯದ ಹಿತವನ್ನು ದೃಷ್ಟಿಯಲ್ಲಿರಿಸಿಕೊಂಡು ಸಹಕಾರಿ ಸಂಸ್ಥೆಗಳನ್ನು ಕಟ್ಟಿ, ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅವರ ಶ್ರಮ ಸದಾ ಸ್ಮರಣೀಯ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಜ್ರಮಹೋತ್ಸವದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಡವರು, ರೈತರ ಬದುಕಿನಲ್ಲಿ ಯಾವುದೇ ಕಷ್ಟಗಳು ಬಂದರೂ, ಅದನ್ನು ಪರಿಹರಿಸುವಲ್ಲಿ ಸಹಕಾರಿ ಸಂಘಗಳು ಬೆನ್ನಿಗೆ ನಿಂತಿವೆ. ಹಾಗಾಗಿಯೇ ರಾಜ್ಯದ ಇತರ ಭಾಗಗಳಲ್ಲಿ ಆಗುವಂತೆ ರೈತರ ಬದುಕು ಆತ್ಮಹತ್ಯೆಯಲ್ಲಿ ಕೊನೆಯಾಗುತ್ತಿಲ್ಲ ಎಂದರು.
ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ನಾರಾಯಣ ಭಟ್ಟ ಬಟ್ಲಗುಂಡಿ, ಸುಬ್ಬಣ್ಣ ಬೋಳ್ಮನೆ, ಉಮೇಶ ಭಾಗ್ವತ, ಮುರಳಿ ಹೆಗಡೆ, ಎಸ್.ಕೆ.ಭಾಗ್ವತ, ಟಿ.ವಿ.ಭಾಗ್ವತ, ಶೇಷಗಿರಿ ಭಟ್ಟ, ಮಹೇಶ ದೇಸಾಯಿ, ಉದ್ಯಮಿ ಬಾಲಕೃಷ್ಣ ನಾಯಕ, ಪ್ರಮುಖರಾದ ಡಿ.ಶಂಕರ ಭಟ್ಟ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ರವಿ ಹೆಗಡೆ ಇದ್ದರು.
ಸಂಘದ ಕಾನೂನು ಸಲಹೆಗಾರರಾದ ಎನ್.ಕೆ.ಭಾಗ್ವತ ಜೇನುಮೂಲೆ, ಜಿ.ವಿ.ಭಾಗ್ವತ ಕಾರಕುಂಕಿ, ಲೆಕ್ಕಪರಿಶೋಧಕ ವಿಘ್ನೇಶ್ವರ ಗಾಂವ್ಕರ ಅವರನ್ನು ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್ ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ಟಿ.ಆರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಸುಬ್ಬಣ್ಣ ದಾನ್ಯಾನಕೊಪ್ಪ ನಿರ್ವಹಿಸಿದರು.