ಮರ ಬಿದ್ದು ಮೃತಪಟ್ಟ ವಿದ್ಯಾರ್ಥಿನಿಗೆ ಶಿಕ್ಷಕವೃಂದದಿಂದ ಅಂತಿಮ ನಮನ
ಯಲ್ಲಾಪುರ ತಾಲೂಕಿನ ಡೊಮಗೇರಿಯಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಮರವೊಂದು ಉರುಳಿಬಿದ್ದು ಸಂಭವಿಸಿದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಸ್ವಾತಿ ಬಾಗು ಕರಾತ ಅವಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಲೆಯ ಶಿಕ್ಷ ವೃಂದದವರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಂಗಳವಾರ ಅಂತಿಮ ನಮನ ಸಲ್ಲಿಸಿದರು.
ಹೋಲಿ ರೋಜರಿ ಶಾಲೆಯ ಎದುರು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂತೋಷ ಜಿಗಳೂರು, ಶಾಲೆಯ ಮುಖ್ಯಾಧ್ಯಾಪಕ ರೆಮಂಡ್ ಫರ್ನಾಂಡಿಸ್, ಶಿಕ್ಷಕ ಎಂ.ರಾಜಶೇಖರ ಮುಂತಾದವರು ಅಂತಿಮ ನಮನ ಸಲ್ಲಿಸಿದರು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಡೊಮಗೆರಿಯಲ್ಲಿ ಸೋಮವಾರ ಸಂಜೆ ಅಂಗನವಾಡಿಯಿಂದ ಮಕ್ಕಳು ಹಾಗೂ ಇತರರು ಮನೆಗೆ ಮರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಮರಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸ್ವಾತಿ ಕರಾತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಳು. ಇದೇ ಘಟನೆಯಲ್ಲಿ ಸಾವಿತ್ರಿ ಕರಾತ ಎಂಬ ಗರ್ಭಿಣಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ನಾಲ್ಕು ಮಕ್ಕಳು ಗಾಯಗೊಂಡಿದ್ದರು.