ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಲು ಆಮಿಷ : 23 ಲಕ್ಷ ರೂ ವಂಚಿಸಿದ ಅಪರಿಚಿತರು
ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಆಮಿಷವೊಡ್ಡಿದ ಅಪರಿಚಿತರು, ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 23,95,261 ರೂ ಹಣವನ್ನು ವಂಚಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರದ ನಂದಗದ್ದಾದ ಕುಲಸಂಬಿ ಕೋಂ ಮಹಮ್ಮದ್ ಷರೀಫ್ ಶೇಖ್ ಅವರು ಈ ಕುರಿತು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. ಇವರ ಮಗನಾದ ಜಹಾಂಗೀರನಿಗೆ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ ಮೂಲಕ ಒಂದು ಲಿಂಕ್ ಬಂದಿದ್ದು, ಈ ಲಿಂಕ್ ಕ್ಲಿಕ್ ಮಾಡಿದಾಗ ಕಂಪನಿಯೊಂದರ ಟ್ರೇಡಿಂಗ್ ಖಾತೆ ಓಪನ್ ಆಗಿದೆ. ಈ ಕಂಪನಿಯ ಏಜಂಟ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿದ್ದಳು.
ಹಣ ಹೂಡಿಕೆ ಮಾಡಿದ ನಂತರ ಈ ಕಂಪನಿಯವರು ಪ್ರಾರಂಭದಲ್ಲಿ ಲಾಭಾಂಶದ ಜೊತೆ ಹೂಡಿಕೆ ಹಣವನ್ನು ಮರಳಿ ನೀಡಿದ್ದರು. ನಂತರ ಕಂಪನಿಯನ್ನು ನಂಬಿದ ಜಹಾಂಗೀರ್ ಅವರು ಹೆಚ್ಚಿನ ಲಾಭದ ಆಸೆಯಿಂದ ಕಂಪನಿಯವರು ಹೇಳಿದಂತೆ ಹಂತ,ಹಂತವಾಗಿ ಒಟ್ಟೂ 23,95,261 ರೂ ಹಣವನ್ನು ಕಂನಿಯ ವಿವಿಧ ಖಾತೆಗಳಿಗೆ ಜಮಾ ಮಾಡಿದ್ದರು. ನಂತರ ಕಂಪನಿಯವರು ಈ ಹಣವನ್ನಾಗಲಿ, ಲಾಭಾಂಶವನ್ನಾಗಲೀ ನೀಡದೇ ವಂಚಿಸಿದ್ದಾರೆ ಎಂದು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.