ಯಲ್ಲಾಪುರ ತಾಲೂಕಿನ ಚಿಮ್ನಳ್ಳಿ ಸಮೀಪದ ತೋಟದಮನೆಯ ಸರಳ,ಸಜ್ಜನ, ಜನಾನುರಾಗಿಯಾಗಿದ್ದ ವೆಂಕಟ್ರಮಣ ಭಟ್ಟ ಅವರು ವಯೋಸಹಜವಾಗಿ ನಿಧನರಾಗಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿರುವ ಇವರ ನಿಧನಕ್ಕೆ ಅಪಾರ ಬಂಧು ಬಳಗದವರು, ಕುಟುಂಬದವರು ಕಂಬನಿ ಮಿಡಿದಿದ್ದಾರೆ.

ದಿ. ವೆಂಕಟ್ರಮಣ ಭಟ್ಟ

ದಿವಂಗತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ. ಶ್ರೀಯುತರ ಬಗ್ಗೆ ಅವರ ಪುತ್ರರಾದ ಸಾಹಿತಿ ಕೇಶವ ಭಟ್ಟ ಚಿಮ್ನಳ್ಳಿಯವರು ಈ ಲೇಖನದ ಮೂಲಕ ತಮ್ಮ ತಂದೆಯವರಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.

ನಮ್ಮ ತೀರ್ಥರೂಪ ತಂದೆಯವರಾದ ಶ್ರೀ ವೆಂಕಟರಮಣ ಅನಂತ ಭಟ್ಟ, ತೋಟದಮನೆ, ಚಿಮ್ನಳ್ಳಿ ಇವರು ದಿನಾಂಕ 27ನೇ ಸೆಪ್ಟೆಂಬರ್ 2025 ರಂದು ವಯೋಸಹಜವಾಗಿ ತಮ್ಮ 84 ನೇ ವಯಸ್ಸಿನಲ್ಲಿ ದೈವಾಧೀನರಾದರೆಂದು ತಿಳಿಸಲು ಅತೀವ ದುಃಖವಾಗುತ್ತಿದೆ.

ಅವರು ಮೂವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಮಾಜಮುಖಿಯಾಗಿದ್ದ ನಮ್ಮ ತಂದೆಯವರು ಗ್ರಾಮಪಂಚಾಯತದ ಸದಸ್ಯರಾಗಿ, ಶ್ರೀ ತ್ರಯಂಬಕೇಶ್ವರ ದೇವಸ್ಥಾನ, ಚಿಮ್ನಳ್ಳಿ, ಶ್ರೀ ಲಕ್ಷ್ಮಿನಾರಸಿಂಹ ದೇವಸ್ಥಾನ ಚಿಮ್ನಳ್ಳಿಯ ಮುಕ್ತೇಸರ ಮತ್ತು ಆಡಳಿತ ಮಂಡಳಿಯ ಆಜೀವ ಸದಸ್ಯರಾಗಿ ಇದ್ದವರು.

ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ತಂದೆಯವರು ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಯಲ್ಲಾಪುರ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಯಕ್ಷಗಾನದ ವಿಶೇಷ ಪಾತ್ರಗಳಿಗೆ ವೇಷಕಟ್ಟಿ ಹೆಜ್ಜೆ ಹಾಕಿದವರು ಮತ್ತು ತಾಳಮದ್ದಳೆ ಅರ್ಥದಾರಿಗಳು. ತಮ್ಮ ಜೀವನದ ಸಂಧ್ಯಾಕಾಲದಲ್ಲೂ ದುರಂತಕೌರವನ ಪಾತ್ರದಲ್ಲಿ ಮಿಂಚಿದವರು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಶ್ರೀಯುತರು ಬರೆದ ಭಜನಾವಳಿ ಎರಡನೇ ಮುದ್ರಣ ಕಂಡಿದೆ.

ಅವರು ಬರೆದಿರುವ ಅಪ್ರಕಟಿತ ಕೃತಿಗಳು ಇಂತಿವೆ: ಚಿಮ್ನಳ್ಳಿ ಚರಿತ್ರೆ (ನಮ್ಮೂರ ಚರಿತ್ರೆ)
2) ಗ್ರಹ ಪ್ರವೇಶ (ಕಾದಂಬರಿ) ಯಕ್ಷಗಾನ ಪ್ರಸಂಗಳು : 1) ಸುದಾಮ ಚರಿತ 2) ಶಬರಿ ರಾಮಾಯಣ 3) ಭೀಷ್ಮ ಪ್ರಪಂಚ

ಕುಟುಂಬದ ಹಿರಿಕರಾಗಿ ತಮ್ಮ ಇಪ್ಪತ್ತನೇಯ ವಯಸ್ಸಿನಲ್ಲಿ ತೋಟದಮನೆಯ ಸುಮಾರು 40 ಜನರ ಕುಟುಂಬದ ಯಜಮಾನಕೆಯನ್ನು ವಹಿಸಿಕೊಂಡು ಸರಿಸುಮಾರು ಐವತ್ತು ದಶಕಗಳಕಾಲ ಕೃಷಿಕರಾಗಿ ಅಣ್ಣ-ತಮ್ಮ, ಅಕ್ಕ-ತಂಗಿ, ಮಕ್ಕಳು-ಮೊಮ್ಮಕ್ಕಳನ್ನು ಕೃಷಿಕವೃತ್ತಿಗೆ ಉತ್ತೇಜನ ನೀಡಿ, ತೊಡಗಿಸಿಕೊಳ್ಳಲು ಅನುವು ಮಾಡಿದವರು. ಮಕ್ಕಳಿಗೆ ಮೊಮ್ಮಕ್ಕಳಿಗೆ ಎಳವೆಯಲ್ಲಿಯೇ ಈ ನೆಲದ ಸಂಸ್ಕೃತಿ, ಕಾವ್ಯ, ವೇದಘೋಷ, ಪುರಾಣ, ಯಕ್ಷಗಾನ ಇತ್ಯಾದಿಗಳನ್ನು ನಿಮ್ಮಗಳ ಜೀವನದ ಅವಿಭಾಜ್ಯ ಅಂಗ ಎಂಬಂತೆ ನಮ್ಮನ್ನು ತಿದ್ದಿ- ತೀಡಿದವರು.

ಭಗವದ್ಗೀತೆ, ಗುರುಚರಿತ್ರೆ ಮತ್ತು ಕುಮಾವ್ಯಾಸ ಭಾರತ ಪಠಣ ಅವರ ದಿನಂಪ್ರತೀ ಕಾಯಕವಾಗಿತ್ತು. ತುಂಬು ಕುಟುಂಬದ ಯಜಮಾನರಾಗಿ, ಸಮಾಜ ಮುಖಿಯಾಗಿ, ವೈದಿಕರಾಗಿ, ಗುರುಪರಂಪರೆಯ ನಿರಂತರ ಅನುಯಾಯಿಯಾಗಿ, ಕವಿ- ಸಾಹಿತಿಯಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಜನಾನುರಾಗಿಯಾಗಿ ಕಷ್ಟಗಳನು ಸುಖದೆಡೆಗೆ ಕೊಂಡೋದ ನಮ್ಮಪ್ಪ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

ಹತ್ತಾರು ಪ್ರಶಸ್ತಿಗಳು, ಸನ್ಮಾನಗಳು ಲಭಿಸಿದರೂ ಅದರ ಗೊಡವೆಗೆ ಹೋದವರಲ್ಲ. ಬರೆದು ಉಳಿಸಿಹೋದ ಅಪ್ರಕಟಿತ ಕೃತಿಗಳನ್ನು ಪರಿಪೂರ್ಣ ಗೊಳಿಸಿ ಪ್ರಕಟಿಸುವ ಕಾರ್ಯವನ್ನು ಅವರ ಎರಡನೇ ಮಗ ಶ್ರೀ ಕೇಶವ ಭಟ್ಟ, ಚಿಮ್ನಳ್ಳಿ, ಕಲಾವಿದರು, ಕವಿಗಳು, ಸಾಹಿತಿಗಳು ಮುಂದಿನ ತಯಾರಿ ನಡೆಸಲು ಅನುವಾಗಿದ್ದಾರೆ.

ಭಗವದ್ಗೀತೆಯು ಹೇಳಿದಂತೆ :
ಜಾತಸ್ಯ ಹಿ ಧ್ರುವೋ ಮೃತ್ಯುಧ್ರ್ರುವ ಜನ್ಮ ಮೃತಸ್ಯ ಚ, ತಸ್ಮಾದಪರಿಹಾರ್ಯಥಃ್ರ ನ ತ್ವಂ ಶೋಚಿತುಮರ್ಹಸಿ | (ಹುಟ್ಟಿದವನ ಸಾವು ನಿಶ್ಚಿತವಾಗಿದೆ ಮತ್ತು ಸತ್ತವನ ಹುಟ್ಟು ನಿಶ್ಚಿತವಾಗಿದೆ. ಆದ್ದರಿಂದ ಈ ಉಪಾಯವಿಲ್ಲದ ವಿಷಯದಲ್ಲಿ ನೀನು ಶೋಕಿಸುವುದು ಯೋಗ್ಯವಲ್ಲ)

ಕುಟುಂಬದ ಎಲ್ಲರಿಗೂ ದುಃಖ ನೀಗಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ, ತಂದೆಯವರ ಆತ್ಮಕ್ಕೆ ಚಿರಶಾಂತಿ ಮತ್ತು ಸದ್ಗತಿ ದೊರಕಲಿ ಎಂದು ನಮ್ಮ ಮನೆಯ ಆರಾಧ್ಯದೈವ ಶ್ರೀ ಲಕ್ಷ್ಮೀನಾರಸಿಂಹ ದೇವರಲ್ಲಿ ಭಕ್ತಿ ಪೂರ್ವಕ ನಮನ ಮಾಡುತ್ತಿದ್ದೇನೆ
ಓಂ ಶಾಂತಿ:
ದುಃಖತಪ್ತ ತೋಟದಮನೆ ಕುಟುಂಬದವರು

ಶ್ರೀ ಕೇಶವ ಭಟ್ಟ, ಚಿಮ್ನಳ್ಳಿ,
ಶ್ರೀ ಅನಂತ ಭಟ್ಟ, ಶ್ರೀ ಶಂಕರ ಭಟ್ಟ ತೋಟದಮನೆ ಸಹೋದರರು, ಸಹೋದರಿಯರು, ಮೊಮ್ಮಕ್ಕಳು, ಅಳಿಯಂದಿರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading