ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಮಹಾಕಾವ್ಯದಲ್ಲಿ ಇಡೀ ವಿಶ್ವಕ್ಕೆ ಅನ್ವಯವಾಗುವಂತಹ ಆದರ್ಶ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವ ತತ್ವಗಳು ಇದ್ದು , ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಈ ತತ್ವಗಳನ್ನು ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿರುವ ದುರ್ಗುಣಗಳನ್ನು ತ್ಯಜಿಸಿ, ತನ್ನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಎಂಬುದಕ್ಕೆ ವಾಲ್ಮೀಕಿ ಅವರೇ ಮಾದರಿ. ಬೇಡನಾಗಿದ್ದ ವ್ಯಕ್ತಿ ಮಹರ್ಷಿಯಾಗಿ,ಆದಿಕವಿಯಾಗಿ ಬದಲಾದ ಬಗ್ಗೆ ಮಹರ್ಷಿ ವಾಲ್ಮೀಕಿ ಅವರ ಜೀವನದಿಂದ ತಿಳಿಯಬಹುದಾಗಿದೆ. ರಾಮಾಯಣದಲ್ಲಿರುವ 24000 ಶ್ಲೋಕಗಳನ್ನು ಯಾವುದೇ ಭಾಷೆಗೆ ತರ್ಜುಮೆ ಮಾಡಿದರೂ ಅದರಲ್ಲಿನ ಮೂಲ ಹೋಲಿಕೆ ಕಾಣಲು ಸಾಧ್ಯವಾಗುವುದಿಲ್ಲ.

ನಾಯಕತ್ವದ ಗುಣಗಳು, ಮಹಿಳಾ ಸಬಲೀಕರಣ, ಆದರ್ಶ ರಾಜ್ಯದ ಕಲ್ಪನೆಯನ್ನು ರಾಮನ ಮೂಲಕ ರಾಮಾಯಣ ಮಹಾಕಾವ್ಯದಲ್ಲಿ ಕಾಣಬಹುದಾಗಿದೆ. ರಾಮಾಯಣವು ಪ್ರತಿಯೊಬ್ಬ ಭಾರತೀಯ ಜೀವನದಲ್ಲಿಯೂ ಹಾಸುಹೊಕ್ಕಾಗಿದ್ದು , ಅದರಲ್ಲಿರುವ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರ ಸಹಕಾರದಿಂದ ಮಾದರಿ ಮತ್ತು ಆದರ್ಶ ಸಮಾಜ ನಿರ್ಮಾಣ ಮಾಡಬೇಕಿದೆ, ಅವಕಾಶ ವಂಚಿತರಿಗೆ ನೆರವು ನೀಡುವ ಮೂಲಕ ಅವರನ್ನೂ ಕೂಡಾ ಅಭಿವೃಧ್ದಿಯೆಡೆಗೆ ಕರೆದೊಯ್ಯಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಚಂದ್ರಶೇಖರ ನಾಯಕ ದೊರೆ , ಹಿಂದುಳಿದ ಬೇಡ ಜನಾಂಗದ ರತ್ನಾಕರ, ನಾರದ ಮಹರ್ಷಿಗಳ ಸೂಚನೆಯಂತೆ ತನ್ನ ದೀರ್ಘ ತಪಸ್ಸಿನ ಮೂಲಕ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡು ದೇಶದ ಆದಿಕಾವ್ಯ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿದ್ದು ಮಹಾನ್ ಸಾಧನೆ. ರಾಮಾಯಣದಲ್ಲಿ ಸಕಲ ಸದ್ಗುಣಗಳು, ಇಡೀ ಮನುಜ ಕುಲ ಪಾಲಿಸಬೇಕಾದ ತತ್ವಗಳಿದ್ದು, ಸಾಮರಸ್ಯದ ಬದುಕು ಸಾಗಿಸುವ ನಿಟ್ಟಿನಲ್ಲಿ ಇದು ಅತ್ಯಂತ ಅಗತ್ಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಝೂಪಿಶಾನ್ ಹಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಸದಸ್ಯರಾದ ಹನುಮಂತ ತಳವಾರ್, ರೋಶನಿ ಮಾಲಸೇಕರ್, ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗರಾಜ್ ತಳವಾರ್, ಪ.ವರ್ಗದ ವಿವಿಧ ಸಂಘಟನೆಗಳ ಮುಖಂಡರಾದ ಗಣೇಶ್ ಬಿಸ್ಟಣ್ಣವರ್ , ದೀಪಕ್ ಕುಡಾಲ್ ಕರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಸ್ವೀಕರಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ.ವರ್ಗದ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮೆರವಣಿಗೆ ಕಾರ್ಯಕ್ರಮ ನಡೆಯಿತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading