ಕಲೆ, ಸಂಸ್ಕೃತಿ ಹಾಗೂ ಭಾರತೀಯ ಪರಂಪರೆಯ ಮೌಲ್ಯಗಳನ್ನು ಶ್ರೀಕೃಷ್ಣಾರ್ಪಣಂ ಸಮಾರಂಭದ ಮೂಲಕ ಸುಜ್ಞಾನ ಸೇವಾ ಸಂಸ್ಥೆಯು ಸಮಾಜಕ್ಕೆ ತಲುಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಸುಜ್ಞಾನ ಸೇವಾ ಸಂಸ್ಥೆ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ ಗೌತಮ ಜುವೆಲ್ಲರ್ಸ್ ಯಲ್ಲಾಪುರ, ಹಾಂಗ್ಯೋ ಐಸ್ ಕ್ರೀಂ ಸಹಯೋಗದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿ ಮತ್ತು ರಂಗ ಸಹ್ಯಾದ್ರಿ ಸಹಕಾರದೊಂದಿಗೆ ಶನಿವಾರ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭದಲ್ಲಿ ಪಾಲ್ಗೊಂಡು, ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.

ಸಮಾರಂಭಕ್ಕೆ ಚಾಲನೆ ನೀಡಿದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹಲವಾರು ಸಮಾಜಮುಖಿ ಮತ್ತು ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿರುವ ಸುಜ್ಞಾನ ಸೇವಾ ಸಂಸ್ಥೆಯು ಶ್ರೀಕೃಷ್ಣಾರ್ಪಣಂ ಸಮಾರಂಭದ ಮೂಲಕ ಸಮಾಜವನ್ನು ಜೋಡಿಸುವ ಕಾರ್ಯವನ್ನು ಮಾದರಿಯಾಗಿ ಮಾಡುತ್ತಿದೆ. ಇಂತಹ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು, ಸಾಂಸ್ಕೃತಿಕ ಪಯಣ ಹೀಗೇ ಮುಂದುವರಿಯಲಿ ಎಂದರು.

ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಕೃಷ್ಣನ ಸಂದೇಶಗಳು ಎಲ್ಲೆಡೆ ತಲುಪಬೇಕು, ಕೃಷ್ಣಪ್ರಜ್ಞೆಯು ಎಲ್ಲೆಡೆ ಜಾಗೃತವಾಗಬೇಕು, ಸಮಷ್ಟಿಯ ಸಮಾಜ ನಿರ್ಮಾಣವಾಗಬೇಕು ಎಂಬ ಸದುದ್ದೇಶದಿಂದ ಈ ಸಮಾರಂಭವನ್ನು ಎಲ್ಲರ ಸಹಕಾರದೊಂದಿಗೆ ಆಯೋಜಿಸಲಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ದಿಯಾ ಹೆಗಡೆ ಮಾತನಾಡಿ, ಇಂತಹ ಶ್ರೇಷ್ಠ ಪ್ರಶಸ್ತಿ ನನಗೆ ದೊರಕಿರುವುದು ಸಂತಸವಾಗಿದೆ. ಇನ್ನಷ್ಟು ಸಾಧನೆ ಮಾಡಲು ಈ ಪ್ರಶಸ್ತಿಯು ನನಗೆ ಪ್ರೋತ್ಸಾಹ, ಪ್ರೇರಣೆ ನೀಡಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಡಿ.ಜನಾರ್ಧನ ಮಾತನಾಡಿ, ಕಲಾ ಕೌಶಲ್ಯಗಳು, ಸಾಂಸ್ಕೃತಿಕ ಪ್ರತಿಭೆಗಳು ದೇಶಕಟ್ಟಲು, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಶ್ರಿಕೃಷ್ಣಾರ್ಪಣ ಸಮಾರಂಭವು ಸುಸಂಪನ್ನತೆಯನ್ನು, ಶ್ರೇಷ್ಠ ಮಾಲ್ಯಗಳನ್ನು ಸಾರುತ್ತಿದೆ ಎಂದರು.

ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಯ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿಜೇತರಿಗೆ ನಗದು ಬಹುಮಾನ, ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಪ್ರಮಾಣ ಪತ್ರ, ಪದಕ ವಿತರಿಸಲಾಯಿತು.

ಸಮಾರಂಭದಲ್ಲಿ ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಮಲೆನಾಡು ಸೊಸೈಟಿಯ ಅಧ್ಯಕ್ಷ ಎಂ.ಅರ್.ಹೆಗಡೆ ಕುಂಬ್ರಿಗುಡ್ಡೆ, ಗ್ರಾಮದೇವಿ ದೇವಾಲಯದ ಅಧ್ಯಕ್ಷ ರಾಜೇಂದ್ರ ಪ್ರಸಾದ ಭಟ್, ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಶಮಾ ಭಾರತ ಗ್ಯಾಸ್ ಮಾಲಿಕ ಅಬ್ದುಲ್ ಖಾದರ್ ಶೇಖ್, ಉದ್ಯಮಿ ಮಂಜುನಾಥ ಜನ್ನು ಗೋಕರ್ಣ, ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪೂಜಾ ಶೇಟ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ವಿನುತಾ ರಾಘವೇಂದ್ರ, ವಾರುಣಿ ಹೆಗಡೆ ಅವರಿಂದ ಭರತನಾಟ್ಯ ನಡೆಯಿತು. ಆತ್ಮಿಕಾ ಹೆಗಡೆ ಭಕ್ತಿಗೀತೆ ಪ್ರಸ್ತುತಪಡಿಸಿದರು. ಶ್ರಿರಕ್ಷಾ ವರ್ಣೆಕರ್ ಪ್ರಾರ್ಥಿಸಿದರು.

ನೂರಾರು ಜನರು ಸಮಾರಂಭಕ್ಕೆ ಆಗಮಿಸಿ ಸಮಾರಂಭವನ್ನು ಕಣ್ತುಂಬಿಸಿಕೊಂಡು ಸಂತಸಪಟ್ಟರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading