ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮೀಪದ ಸೂಳಗಾರ ಗ್ರಾಮದ ನೇರ್ಲಮನೆಯ ಹಿರಿಯ ಪುರೋಹಿತ ವಿ.ಮಹಾಬಲೇಶ್ವರ ಭಟ್ಟ (74) ಅಲ್ಪಕಾಲದ ವಯೋಸಹಜ ಅಸೌಖ್ಯದಿಂದ ಶನಿವಾರ ಸಂಜೆ ನಿಧನರಾಗಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಮಹಾಬಲೇಶ್ವರ ಭಟ್ಟ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಪೌರೋಹಿತ್ಯ ವೃತ್ತಿಯಲ್ಲಿ ನಿರತರಾಗಿದ್ದರು. ವಿದ್ವಾಂಸರಾಗಿ, ಹಿರಿಯ ಪುರೋಹಿತರಾಗಿ ಗುರುತಿಸಿಕೊಂಡಿದ್ದ ಮಹಾಬಲೇಶ್ವರ ಭಟ್ಟ ಅವರು ಸಾಹಿತ್ಯ, ನಾಟಕ, ಕಲಾ ಕ್ಷೇತ್ರದಲ್ಲಿಯೂ ಪ್ರೌಢಿಮೆ ಹೊಂದಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದರು.

ದಿ.ಮಹಾಬಲೇಶ್ವರ ಭಟ್ಟ ನೇರ್ಲಮನೆಯವರು ಪರಿಸರಪ್ರೇಮಿಯಾಗಿ ಪರಿಸರ ಸಂರಕ್ಷಣೆಗೆ ತನ್ನ ಕೊಡುಗೆಯನ್ನು ನೀಡಿದ್ದರು. ಕಳೆದ ಆರು ವರ್ಷಗಳ ಹಿಂದೆ ನಂದೊಳ್ಳಿಯಿಂದ ನೇರ್ಲಮನೆಯ ವರೆಗೆ ಅಂದಾಜು ನಾಲ್ಕು ಕೀ.ಮೀ. ದೂರದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಂತ ಖರ್ಚಿನಲ್ಲಿ ಸಾವಿರಾರು ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಿದ್ದರು. ಅವರ ಪರಿಸರ ಕಾಳಜಿಗೆ ಎಲ್ಲೆಡೆಯಿಂದ ಅಪಾರವಾದ ಶ್ಲಾಘನೆ ವ್ಯಕ್ತವಾಗಿತ್ತು.

ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆಯವರು ಈ ಕುರಿತು ವಿವಿಧ ಮಾಧ್ಯಮಗಳಲ್ಲಿ ವಿಶೇಷ ಲೇಖನಗಳನ್ನು ಪ್ರಕಟಿಸಿ ಈ ಬಗ್ಗೆ ಗಮನ ಸೆಳೆದಿದ್ದರು. ಮಹಾಬಲೇಶ್ವರ ಭಟ್ಟ ಅವರ ಈ ಅಪರೂಪದ ಪರಿಸರ ಪ್ರೇಮದ ಲೇಖನವನ್ನು ಗಮನಿಸಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಂದು ಮಹಾಬಲೇಶ್ವರ ಭಟ್ಟ ಅವರ ಮಾದರಿ ಕಾರ್ಯವನ್ನು ಶ್ಲಾಘಿಸಿ, ಸಮಾರಂಭದಲ್ಲಿ ಮಹಾಬಲೇಶ್ವರ ಭಟ್ಟ ಅವರನ್ನು DFO ಅವರ ನೇತ್ರತ್ವದಲ್ಲಿ ಇಲಾಖೆಯ ವತಿಯಿಂದ ಸನ್ಮಾನಿಸಿ, ಗೌರವಿಸಿದ್ದರು.

ಮಹಾಬಲೇಶ್ವರ ಭಟ್ಟ ಅವರು ಜ್ಯೋತಿಷಿಯಾಗಿಯೂ ಗುರುತಿಸಿಕೊಂಡಿದ್ದರು. ಹಲವು ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದರು. ತಾಳಮದ್ದಳೆಯ ಅರ್ಥಧಾರಿಯಾಗಿಯೂ ಗುರುತಿಸಿಕೊಂಡಿದ್ದರು. ಸೌಮ್ಯ ಸ್ವಭಾವದ ಮಹಾಬಲೇಶ್ವರ ಭಟ್ಟ ಅವರು ಕುಟುಂಬದವರನ್ನು, ಅಪಾರ ಬಂಧು,ಬಳಗವನ್ನು, ಶಿಷ್ಯವೃಂದದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ರವಿವಾರ ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading